ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ 'ಒಂದು ರಾಷ್ಟ್ರ, ಒಂದು ವಿದ್ಯುತ್ ದರ' ನೀತಿ (ದೇಶಾದ್ಯಂತ ಏಕರೂಪದ ವಿದ್ಯುತ್ ಶುಲ್ಕ) ಗೆ ಕರೆ ನೀಡಿದ್ದು, ಕೆಲವು ರಾಜ್ಯಗಳು ಇತರರಿಗಿಂತ ಹೆಚ್ಚಿನ ದರದಲ್ಲಿ ವಿದ್ಯುತ್ ಖರೀದಿಸಬೇಕಾಗಿದೆ ಎಂದು ಹೇಳಿದ್ದಾರೆ. 15,871 ಕೋಟಿ ಮೌಲ್ಯದ ವಿದ್ಯುತ್ ಇಲಾಖೆಯ ಯೋಜನೆಗಳನ್ನು ಬುಧವಾರ ಅನಾವರಣಗೊಳಿಸಿದ ಅವರು, ಬಿಹಾರವು ಇತರ ರಾಜ್ಯಗಳಿಗೆ ಹೋಲಿಸಿದರೆ ಕೇಂದ್ರ ಸರ್ಕಾರದ ವಿದ್ಯುತ್ ಸ್ಥಾವರಗಳಿಂದ ಹೆಚ್ಚಿನ ದರದಲ್ಲಿ ವಿದ್ಯುತ್ ಪಡೆಯುತ್ತದೆ ಎಂದರು.
ಎಲ್ಲ ರಾಜ್ಯಗಳು ದೇಶದ ಒಟ್ಟಾರೆ ಬೆಳವಣಿಗೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿವೆ. ಒಂದು ರಾಷ್ಟ್ರ, ಒಂದು ವಿದ್ಯುತ್ ದರ ನೀತಿ ಇರಬೇಕು ಎಂದು ನಾನು ಈ ಹಿಂದೆ ಹಲವಾರು ಬಾರಿ ಹೇಳಿದ್ದೇನೆ. ಕೆಲವು ರಾಜ್ಯಗಳು ಉತ್ಪಾದನಾ ಘಟಕಗಳಿಂದ ಹೆಚ್ಚಿನ ದರದಲ್ಲಿ ವಿದ್ಯುತ್ ಖರೀದಿಸಲು ಕಾರಣವೇನು? ಇದಕ್ಕೆ ಕೇಂದ್ರ ಸರ್ಕಾರ ಕಾರಣವೇ? ದೇಶಾದ್ಯಂತ ಏಕರೂಪದ ವಿದ್ಯುತ್ ದರ ಇರಬೇಕು ಎಂದು ಕುಮಾರ್ ಹೇಳಿದರು.
ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯದಲ್ಲಿ ಸ್ಮಾರ್ಟ್ ಪ್ರಿಪೇಯ್ಡ್ ವಿದ್ಯುತ್ ಮೀಟರ್‌ಗಳನ್ನು ಅಳವಡಿಸಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು.