ಪಾಟ್ನಾ: ಹಿಂದಿ ಹೃದಯಭಾಗದ ಮೂರು ರಾಜ್ಯಗಳಲ್ಲಿ ಬಿಜೆಪಿಯ ವಿಜಯಕ್ಕೆ ಹೆಚ್ಚಿನ ಮಹತ್ವ ನೀಡದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಕೇಸರಿ ಪಕ್ಷದ ಇಂತಹ ಗೆಲುವಿನ ಬಗ್ಗೆ ಹೆಚ್ಚು ಚರ್ಚಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ ಪ್ರತಿಪಕ್ಷಗಳ ಐಎನ್‌ಡಿಐಎ ಮೈತ್ರಿಕೂಟ ತನ್ನ ಭವಿಷ್ಯದ ಕಾರ್ಯತಂತ್ರಗಳನ್ನು ಶೀಘ್ರವಾಗಿ ಅಂತಿಮಗೊಳಿಸಬೇಕಿದೆ ಎಂದು ಅವರು ಕರೆ ನೀಡಿದ್ದಾರೆ.
ಡಿಸೆಂಬರ್ ಮೂರನೇ ವಾರದಲ್ಲಿ ನಡೆಯಲಿರುವ ಐಎನ್‌ಡಿಐಎ ಮೈತ್ರಿಕೂಟದ ಮುಂದಿನ ಸಭೆಯತ್ತ ನನ್ನ ಗಮನವಿದೆ ಎಂದು ಕುಮಾರ್ ಹೇಳಿದರು. "ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ಚುನಾವಣಾ ರಾಜಕೀಯದಲ್ಲಿ ಇವೆಲ್ಲ ನಡೆಯುತ್ತಿರುತ್ತವೆ. ಇದಕ್ಕೂ ಮುನ್ನ ಈ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರಗಳಿದ್ದವು. ಈಗ ಬಿಜೆಪಿ ಗೆದ್ದಿದೆ. ಇಂಥ ವಿಷಯಗಳ ಬಗ್ಗೆ ಹೆಚ್ಚು ಚರ್ಚಿಸುವ ಅಗತ್ಯವಿಲ್ಲ. ಈ ಬಾರಿ ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿದೆ" ಎಂದು ಜೆಡಿಯು ನಾಯಕ ನಿತೀಶ್ ಸುದ್ದಿಗಾರರಿಗೆ ತಿಳಿಸಿದರು.
ಕೆಲ ಹಿರಿಯ ನಾಯಕರು ತಮ್ಮ ಕೆಲಸದ ಒತ್ತಡದಿಂದ ಹಾಜರಾಗಲು ಸಾಧ್ಯವಾಗದ ಕಾರಣದಿಂದ ಡಿಸೆಂಬರ್ 6ರಂದು ನಡೆಯಬೇಕಿದ್ದ ಐಎನ್‌ಡಿಐಎ ಮೈತ್ರಿಕೂಟದ ಸಭೆಯನ್ನು ಮುಂದೂಡಲಾಗಿದೆ ಎಂದು ಕುಮಾರ್ ಹೇಳಿದರು. "ಡಿಸೆಂಬರ್ ಮೂರನೇ ವಾರ ನಡೆಯಲಿರುವ ಮುಂದಿನ ಸಭೆಯಲ್ಲಿ ಸೀಟು ಹಂಚಿಕೆ ವಿಷಯ ಸೇರಿದಂತೆ ತನ್ನ ಭವಿಷ್ಯದ ಕಾರ್ಯತಂತ್ರಗಳನ್ನು ಅಂತಿಮಗೊಳಿಸಲು ಐಎನ್‌ಡಿಐಎ ಒಕ್ಕೂಟವು ತ್ವರಿತವಾಗಿ ಕೆಲಸ ಮಾಡಬೇಕೆಂಬುದು ನನ್ನ ಭಾವನೆ" ಎಂದು ಅವರು ಹೇಳಿದರು.