ನವದೆಹಲಿ: ಒರಿಜಿನಲ್ ಕಂಟೆಂಟ್ ಪಬ್ಲಿಷ್ ಮಾಡುವ ಡಿಜಿಟಲ್ ಸುದ್ದಿಗಳ ಪ್ರಕಾಶಕರೊಂದಿಗೆ ದೊಡ್ಡ ಟೆಕ್ನಾಲಜಿ ಕಂಪನಿಗಳು ತಮ್ಮ ಆದಾಯದ ಒಂದು ಭಾಗವನ್ನು ಹಂಚಿಕೊಳ್ಳಬೇಕೆಂದು ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ಒತ್ತಾಯಿಸಿದ್ದಾರೆ. ಶುಕ್ರವಾರ ಡಿಜಿಟಲ್ ನ್ಯೂಸ್ ಪಬ್ಲಿಷರ್ಸ್ ಅಸೋಸಿಯೇಷನ್ (ಡಿಎನ್‌ಪಿಎ) ಸಮ್ಮೇಳನಕ್ಕೆ ಸಂದೇಶವೊಂದನ್ನು ಕಳುಹಿಸಿರುವ ಚಂದ್ರ, ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್ ಮತ್ತು ಯುರೋಪಿಯನ್ ಯೂನಿಯನ್ ಈಗಾಗಲೇ ತಮ್ಮ ಶಾಸಕಾಂಗಗಳ ಮೂಲಕ ಉಪಕ್ರಮವನ್ನು ತೆಗೆದುಕೊಂಡಿವೆ ಮತ್ತು ಸುದ್ದಿ ವಿಷಯದ ರಚನೆಕಾರರು ಮತ್ತು ಸಂಗ್ರಾಹಕರ ನಡುವೆ ಆದಾಯದ ನ್ಯಾಯಯುತ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ತಮ್ಮ ಸ್ಪರ್ಧಾತ್ಮಕ ಆಯೋಗಗಳನ್ನು ಬಲಪಡಿಸಿವೆ ಎಂದು ತಿಳಿಸಿದ್ದಾರೆ.
ಯಾಕೆ ಆದಾಯ ಹಂಚಿಕೊಳ್ಳಬೇಕು?: ಸುದ್ದಿ ಉದ್ಯಮದ ಬೆಳವಣಿಗೆಗೆ, ಒರಿಜಿನಲ್ ಕಂಟೆಂಟ್ ಕ್ರಿಯೇಟರ್ ಆಗಿರುವ, ಸುದ್ದಿಗಳನ್ನು ಪಬ್ಲಿಷ್ ಮಾಡುವ ಕಂಪನಿಗಳು ಈ ಕಂಪನಿಗಳ ಸುದ್ದಿಗಳನ್ನು ಸಂಗ್ರಹಿಸುವ ದೊಡ್ಡ ಟೆಕ್ನಾಲಜಿ ಕಂಪನಿಗಳು ಪಡೆಯುವ ಆದಾಯದಲ್ಲಿ ನ್ಯಾಯಯುತ ಪಾಲನ್ನು ನೀಡುವುದು ಮುಖ್ಯವಾಗಿದೆ ಎಂದು ಡಿಎನ್‌ಪಿಎ ಸಮ್ಮೇಳನಕ್ಕೆ ಕಳುಹಿಸಲಾದ ಸಂದೇಶದಲ್ಲಿ ಹೇಳಿದ್ದಾರೆ. ಕೋವಿಡ್ ನಂತರ, ಡಿಜಿಟಲ್ ಸುದ್ದಿ ಉದ್ಯಮ ಮಾತ್ರವಲ್ಲದೆ ಮುದ್ರಣ ಸುದ್ದಿ ಉದ್ಯಮದ ಆರ್ಥಿಕ ಸ್ಥಿತಿಗತಿಗಳು ಸಹ ಸರಿಯಾಗಿಲ್ಲ ಎಂದು ಚಂದ್ರ ತಿಳಿಸಿದ್ದಾರೆ.
ಸಾಂಪ್ರದಾಯಿಕ ಸುದ್ದಿ ಉದ್ಯಮದ ಮೇಲೆ ಉಂಟಾಗುತ್ತಿರುವ ಪ್ರತಿಕೂಲ ಪರಿಣಾಮಗಳು ಮುಂದುವರೆದಲ್ಲಿ ನಮ್ಮ ನಾಲ್ಕನೇ ಸ್ತಂಭವಾದ ಪತ್ರಿಕೋದ್ಯಮದ ಭವಿಷ್ಯಕ್ಕೂ ಹೊಡೆತ ಬೀಳುತ್ತದೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ, ಇದು ಪತ್ರಿಕೋದ್ಯಮ ಮತ್ತು ವಿಶ್ವಾಸಾರ್ಹ ವಿಷಯದ ಪ್ರಶ್ನೆಯಾಗಿದೆ ಎಂದು. ಸಾಂಪ್ರದಾಯಿಕ ಸುದ್ದಿ ಉದ್ಯಮವು ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ಇತಿಹಾಸವನ್ನು ಹೊಂದಿದೆ ಎಂದು ಚಂದ್ರು ಹೇಳಿದರು.