ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಲಷ್ಕರ್-ಎ-ತೊಯ್ಬಾದ (ಎಲ್‌ಇಟಿ) ಉಪ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ನ ಶಂಕಿತ ಉಗ್ರಗಾಮಿ ಸಹಚರನನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಬಾರಾಮುಲ್ಲಾ ಪೊಲೀಸ್, ಸೇನೆಯ 29 ಆರ್‌ಆರ್ ಮತ್ತು 2 ಬಿಎನ್ ಎಸ್‌ಎಸ್‌ಬಿ ಜಂಟಿ ಪಡೆಗಳು ಸಿಂಗ್ ಪೋರಾ ಪಟ್ಟಣದಲ್ಲಿ ನಾಕಾ ತಪಾಸಣೆಯ ವೇಳೆ ಶಂಕಿತನನ್ನು ಬಂಧಿಸಿವೆ. "ಮತಿಪೋರಾ ಕಡೆಯಿಂದ ಫೆರಾನ್ (ಗೌನ್) ಧರಿಸಿದ್ದ ವ್ಯಕ್ತಿಯೊಬ್ಬ ನಾಕಾ ತಂಡವನ್ನು ನೋಡಿ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ. ಈ ಸಂದರ್ಭದಲ್ಲಿ ಎಚ್ಚೆತ್ತ ತಂಡ ಹಿಂಬಾಲಿಸಿ ಜಾಣ್ಮೆಯಿಂದ ಬಂಧಿಸಿದೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಚಾರಣೆಯಲ್ಲಿ ಆತ ತನ್ನ ಹೆಸರು ಬೋನಿಚಾಕಲ್ ಆರಂಪೋರ ಪಟ್ಟಣದ ಅಲಿ ಮೊಹಮ್ಮದ್ ಭಟ್ ಎಂದು ತಿಳಿಸಿದ್ದಾನೆ. ಈತ ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್ಇಟಿ ಸಂಘಟನೆಯಲ್ಲಿ ಭಯೋತ್ಪಾದಕ ಸಹಚರನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಮಾರಕಾಸ್ತ್ರ ಮತ್ತು ಯುಎಲ್‌ಎ (ಪಿ) ಕಾಯ್ದೆಯ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ:ವಿಮಾನ ಹೈಜಾಕ್ ಅಪರಾಧಿ ಮುಷ್ತಾಕ್ ಜರ್ಗಾರ್ ಆಸ್ತಿ ಮುಟ್ಟುಗೋಲು ಹಾಕಿದ ಎನ್ಐಎ
ಇಬ್ಬರು ಉಗ್ರರ ಬಂಧನ:ಮಾರ್ಚ್ 7ರಂದು ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಕುಂಜೆರ್ ಪ್ರದೇಶದಲ್ಲಿ ಲಷ್ಕರ್-ಎ-ತೊಯ್ಬಾ (ಟಿಆರ್‌ಎಫ್) ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಪೊಲೀಸರು ಬಂಧಿಸಿದ್ದರು. ಬಾರಾಮುಲ್ಲಾ ಪೊಲೀಸ್ ಮತ್ತು ಸಿಆರ್‌ಪಿಎಫ್‌ನ 176 ಬೆಟಾಲಿಯನ್ ಜಂಟಿ ತಂಡವು ಅನುಮಾನಗೊಂಡು ಉಗ್ರರು ಇರುವ ಮಾಹಿತಿ ಪಡೆದ ಬಳಿಕ ಶೋಧ ಕಾರ್ಯಾಚರಣೆ ಶುರು ಮಾಡಿತ್ತು.
ಶೋಧ ಕಾರ್ಯಾಚರಣೆ ವೇಳೆ ಲಷ್ಕರ್-ಎ-ತೊಯ್ಬಾ (ಟಿಆರ್‌ಎಫ್) ಸಂಘಟನೆಗೆ ಸೇರಿದ ಉಗ್ರರನ್ನು ಪತ್ತೆ ಹಚ್ಚಿ ಬಂಧಿಸಿತ್ತು. ಉಗ್ರರನ್ನು ಝಂಡ್‌ಪಾಲ್ ಕಿಂಜಾರ್ ನಿವಾಸಿ ಮುಷ್ತಾಕ್ ಅಹ್ಮದ್ ಖಾನ್ ಅವರ ಪುತ್ರ ಖುರ್ಷಿದ್ ಅಹ್ಮದ್ ಖಾನ್ ಮತ್ತು ಗುಲಾಮ್ ಮೊಹಿಯುದ್ದೀನ್ ಖಾನ್ ಅವರ ಪುತ್ರ ರಿಯಾಜ್ ಅಹ್ಮದ್ ಖಾನ್ ಎಂದು ಗುರುತಿಸಲಾಗಿತ್ತು.
ಇದನ್ನೂ ಓದಿ:ಕಾಶ್ಮೀರಿ ಪಂಡಿತ ಸಂಜಯ್ ಶರ್ಮಾ ಹತ್ಯೆಗೆ ಆಕ್ರೋಶ: ಸ್ಥಳೀಯರಿಂದ ಉಗ್ರರ ವಿರುದ್ಧ ಪ್ರತಿಭಟನೆ
ಬಾರಾಮುಲ್ಲಾ ಪೊಲೀಸ್ರು ಶಂಕಿತ ಇಬ್ಬರು ಉಗ್ರರನ್ನು ವಿಚಾರಣೆಗೆ ಒಳಪಡಿಸಿದಾಗ ನಿಷೇಧಿತ ಸಂಘಟನೆ ಲಷ್ಕರ್-ಎ-ತೊಯ್ಬಾ (ಟಿಆರ್‌ಎಫ್)ದೊಂದಿಗೆ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಬಂಧಿತರಿಂದ ಅಪಾರ ಮದ್ದು ಗುಂಡುಗಳನ್ನು ವಶಕ್ಕೆ ಪಡೆದಿದ್ದು, ಅವುಗಳಲ್ಲಿ ಎಕೆ-47 ರೈಫಲ್‌ನ 2 ಮ್ಯಾಗಜೀನ್‌ಗಳು, ಎಕೆ-47 ರೈಫಲ್‌ನ 15 ಬುಲೆಟ್‌ಗಳು ಮತ್ತು ನಿಷೇಧಿತ ಸಂಘಟನೆ ಲಷ್ಕರ್-ಎ-ತೊಯ್ಬಾ (ಟಿಆರ್‌ಎಫ್) 20 ಖಾಲಿ ಪೋಸ್ಟರ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ:ಲಷ್ಕರ್ ಎ ತೊಯ್ಬಾ ಸಂಘಟನೆಗೆ ಸೇರಿದ ಇಬ್ಬರು ಉಗ್ರರ ಬಂಧನ: ಶಸ್ತ್ರಾಸ್ತ್ರ ಜಪ್ತಿ