ಹೈದರಾಬಾದ್: ಇಸ್ರೇಲ್-ಹಮಾಸ್ ಉಗ್ರರ ಸಂಘರ್ಷ ನಡೆಯುತ್ತಿರುವ ಮಧ್ಯೆ ಈ ಬಗ್ಗೆ ಮಾತನಾಡಿರುವ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ, ಪ್ಯಾಲೆಸ್ಟೈನ್ ವಿಷಯ ಕೇವಲ ಮುಸಲ್ಮಾನರಿಗೆ ಸಂಬಂಧಿಸಿದ್ದಲ್ಲ, ಇದು ಮಾನವೀಯತೆಯ ವಿಷಯ ಹಾಗೂ ನ್ಯಾಯವನ್ನು ಬಯಸುವ ಎಲ್ಲರಿಗೂ ಇದು ಸಂಬಂಧಿಸಿದ್ದಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಪ್ಯಾಲೆಸ್ಟೈನ್ ಜನರ ಬೆಂಬಲಕ್ಕೆ ನಿಲ್ಲಬೇಕು ಎಂದು ಆಗ್ರಹಿಸಿದರು.
ಶನಿವಾರ ರಾತ್ರಿ ಇಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಹೈದರಾಬಾದ್ ಸಂಸದ ಒವೈಸಿ, ಕಳೆದ ಆರು ದಿನಗಳಲ್ಲಿ ಇಸ್ರೇಲ್ ಸರ್ಕಾರವು ಗಾಜಾ ಮೇಲೆ 6,000 ಬಾಂಬ್ಗಳ ಮೂಲಕ ಬಾಂಬ್ ದಾಳಿ ನಡೆಸಿದೆ ಮತ್ತು ಇದರಿಂದಾಗಿ ಮಕ್ಕಳು, ಮಹಿಳೆಯರು ಸೇರಿದಂತೆ 1,500 ಕ್ಕೂ ಹೆಚ್ಚು ಪ್ಯಾಲೆಸ್ಟೈನ್ ಜನ ಸಾವನ್ನಪ್ಪಿದ್ದಾರೆ ಹಾಗೂ ಸಾವಿರಾರು ಜನರು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಹೇಳಿದರು.
ಗಾಜಾದಲ್ಲಿ ನಡೆಯುತ್ತಿರುವುದು ಜನಾಂಗೀಯ ಹತ್ಯಾಕಾಂಡ ಎಂದು ಆರೋಪಿಸಿದ ಅವರು, ಇಸ್ರೇಲ್ ಮಾಡುತ್ತಿರುವ ಯುದ್ಧಾಪರಾಧಗಳನ್ನು ಭಾರತ ಸರ್ಕಾರ ಮತ್ತು ದೇಶ ಖಂಡಿಸಬೇಕು ಎಂದು ಒತ್ತಾಯಿಸಿದರು. ತಾವು ಪ್ಯಾಲೆಸ್ಟೈನ್ ಪರವಾಗಿರುವುದಾಗಿ ಹೇಳಿದ ಅವರು, 21 ಲಕ್ಷ ಜನಸಂಖ್ಯೆ ಹೊಂದಿರುವ ಗಾಜಾದ 10 ಲಕ್ಷ ಬಡವರು ನಿರಾಶ್ರಿತರಾಗಿದ್ದಾರೆ ಎಂದರು. ಗಾಜಾದ ಎಲ್ಲರನ್ನೂ ಮುಗಿಸಬೇಕೆಂದು ಇಸ್ರೇಲ್ ಸರ್ಕಾರ ಬಯಸಿದೆ ಮತ್ತು ಮಾನವ ಹಕ್ಕುಗಳ ಬಗ್ಗೆ ಮಾತನಾಡುವ ಜಗತ್ತು ಇಂದು ಮೌನವಾಗಿದೆ ಎಂದು ಅವರು ಆರೋಪಿಸಿದರು.
ಕಳೆದ 70 ವರ್ಷಗಳಿಂದ ಇಸ್ರೇಲ್ ಆಕ್ರಮಣಕಾರಿ ಪ್ರದೇಶವಾಗಿದೆ ಮತ್ತು ಪ್ಯಾಲೆಸ್ಟೈನ್ ಆಕ್ರಮಿತ ಪ್ರದೇಶವಾಗಿದೆ ಎಂದು ಓವೈಸಿ ಹೇಳಿದರು. "ಯಾರೇ ಹಿಂಸಾಚಾರ ನಡೆಸಿದರೂ ಅದನ್ನು ನಾವು ಖಂಡಿಸುತ್ತೇವೆ. ಇದು ಪ್ಯಾಲೆಸ್ಟೈನ್ ಜನರ ಜನಾಂಗೀಯ ಶುದ್ಧೀಕರಣವಾಗಿದೆ. ಗಾಜಾ ಜನರ ಮೇಲೆ ಕ್ರೌರ್ಯ ನಡೆಯುತ್ತಿದೆ. ಅಮೆರಿಕ, ಬ್ರಿಟನ್, ಯುರೋಪ್ ಇಂದು ಮೂಕ ಪ್ರೇಕ್ಷಕರಾಗಿವೆ" ಎಂದು ಒವೈಸಿ ಹೇಳಿದರು.
"ಗಾಜಾದಲ್ಲಿ ಪ್ಯಾಲೆಸ್ಟೈನ್ ಜನರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳನ್ನು ನಿಲ್ಲಿಸಿ ಮೋದಿ ಜಿ, ಪ್ಯಾಲೆಸ್ಟೈನ್ ಜನರೊಂದಿಗೆ ಒಗ್ಗಟ್ಟನ್ನು ತೋರಿಸಿ ಎಂದು ನಾವು ನಮ್ಮ ಪ್ರಧಾನಿಗೆ ಹೇಳಲು ಬಯಸುತ್ತೇವೆ... 21 ಲಕ್ಷ ಜನರಲ್ಲಿ 10 ಲಕ್ಷ ಜನ ನಿರಾಶ್ರಿತರಾಗಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಬ್ಬ ದೆವ್ವ, ಆತ ಯುದ್ಧ ಅಪರಾಧಿ" ಎಂದು ಅವರು ತಿಳಿಸಿದರು.
ಪ್ಯಾಲೆಸ್ಟೈನ್ ಹೆಸರನ್ನು ತೆಗೆದುಕೊಳ್ಳುವವರ ವಿರುದ್ಧ ಪ್ರಕರಣ ದಾಖಲಿಸಿ ಎಂದು ನಮ್ಮ ದೇಶದ ಬಾಬಾ ಮುಖ್ಯಮಂತ್ರಿಯೊಬ್ಬರು ಹೇಳಿದ್ದಾರೆ ಎಂದು ಓವೈಸಿ ಹೇಳಿದರು. "ಕೇಳಿ ಮುಖ್ಯಮಂತ್ರಿಗಳೇ, ನಾನು ನಮ್ಮ ತ್ರಿವರ್ಣ ಧ್ವಜದ ಜೊತೆಗೆ ಪ್ಯಾಲೆಸ್ಟೈನ್ ಧ್ವಜ ಧರಿಸಿದ್ದೇನೆ. ನಾನು ಪ್ಯಾಲೆಸ್ಟೈನ್ ನೊಂದಿಗೆ ನಿಲ್ಲುತ್ತೇನೆ ಮತ್ತು ಹಾಗೆ ಮಾಡುವುದನ್ನು ಮುಂದುವರಿಸುತ್ತೇನೆ. ಪ್ಯಾಲೆಸ್ಟೈನ್ ಸಮಸ್ಯೆ ಕೇವಲ ಮುಸ್ಲಿಮರಿಗೆ ಮಾತ್ರ ಸಂಬಂಧಿಸಿದ್ದಲ್ಲ, ಇದು ಮಾನವೀಯ ವಿಷಯ" ಎಂದು ಒವೈಸಿ ಪುನರುಚ್ಚರಿಸಿದರು.
ಇದನ್ನೂ ಓದಿ:ಗಾಜಾ ಮೇಲಿನ ದಾಳಿ ನಿಲ್ಲಿಸದಿದ್ದರೆ ಮಧ್ಯಪ್ರವೇಶ-ಇಸ್ರೇಲ್ಗೆ ಇರಾನ್ ಎಚ್ಚರಿಕೆ; ಮತ್ತೊಂದು ಯುದ್ಧವಿಮಾನ ವಾಹಕ ನೌಕೆ ಕಳುಹಿಸಿಕೊಟ್ಟ ಅಮೆರಿಕ