ದೋಡಾ (ಜಮ್ಮು ಮತ್ತು ಕಾಶ್ಮೀರ): ಕಾಂಗ್ರೆಸ್ ಬಿಟ್ಟು ಹೊರನಡೆದ ಎರಡು ತಿಂಗಳ ನಂತರ, ಕಾಂಗ್ರೆಸ್‌ನ ಮಾಜಿ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಮತ್ತೆ ಮಾತೃ ಪಕ್ಷದ ಪರವಾಗಿ ಹೇಳಿಕೆ ನೀಡಿದ್ದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಲಿ ಎಂದು ನಾನು ಈಗಲೂ ಬಯಸುತ್ತೇನೆ ಎಂದು ಆಜಾದ್ ಹೇಳಿದ್ದಾರೆ.
ಇದೇ ಸಮಯದಲ್ಲಿ ಆಪ್ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಆಪ್ ಪಂಜಾಬ್ನಲ್ಲಿ ವಿಫಲವಾಗಿದೆ. ಈ ರಾಜ್ಯದಲ್ಲಿ ಆಪ್ ಏನೂ ಮಾಡಲಾರದು. ಪಂಜಾಬ್ ಜನತೆ ಮತ್ತೊಮ್ಮೆ ಆಪ್ಗೆ ಮತ ನೀಡಲ್ಲ ಎಂದು ಹೇಳಿದ್ದಾರೆ.
ದೋಡಾ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಜಾದ್, ಕಾಂಗ್ರೆಸ್‌ನ ಜಾತ್ಯತೀತತೆಯನ್ನು ಹೊಗಳಿದರು. ಪಕ್ಷದೊಳಗಿನ ದುರ್ಬಲ ವ್ಯವಸ್ಥೆಯ ಬಗ್ಗೆ ಮಾತ್ರ ನನ್ನ ವಿರೋಧವಿದೆ. ಆದರೆ ಕಾಂಗ್ರೆಸ್‌ನ ಜಾತ್ಯತೀತತೆಯ ಬಗ್ಗೆ ನಾನೆಂದೂ ವಿರೋಧಿಯಲ್ಲ ಎಂದು ತಿಳಿಸಿದರು.