ಚೆನ್ನೈ:ತಮಿಳುನಾಡಿನಲ್ಲಿ ಇಬ್ಬರು ಯುವತಿಯರು ಪರಸ್ಪರ ಕುಟುಂಬದ ಒಪ್ಪಿಗೆಯ ಮೇರೆಗೆ ಸಲಿಂಗ ವಿವಾಹ ಬಂಧನಕ್ಕೆ ಒಳಗಾದ ವಿದ್ಯಮಾನ ತಡವಾಗಿ ಬೆಳಕಿಗೆ ಬಂದಿದೆ. ಹೆಣ್ಣಾಗಿ ಹುಟ್ಟಿದ್ದ ತಮಿಳುನಾಡಿನ ಸುಭಿಕ್ಷಾ ಹಾರ್ಮೋನ್ ಬದಲಾವಣೆಯಿಂದ ಗಂಡಸಿನ ಭಾವನೆಗಳನ್ನು ಹೊಂದಿದ್ದು, ಬಾಂಗ್ಲಾದೇಶದ ಮಹಿಳೆ ಟೀನಾ ದಾಸ್ರನ್ನು ವರಿಸಿ ಆಗಸ್ಟ್ 31 ರಂದು ಸಪ್ತಪದಿ ತುಳಿದಿದ್ದಾರೆ.
ಕೆನಡಾದಲ್ಲಿ ಮೂಡಿದ ಪ್ರೀತಿ:ತಮಿಳುನಾಡಿನ ಸುಭಿಕ್ಷಾ ಸುಬ್ರಮಣಿ (29) ಜನ್ಮತಾ ಹೆಣ್ಣಾಗಿದ್ದಳು. ತಮ್ಮ 19 ನೇ ವಯಸ್ಸಿನಲ್ಲಿ ದೇಹದಲ್ಲಿನ ಹಾರ್ಮೋನು ಬದಲಾವಣೆಗಳಿಂದ ಅವಳು ಪುರುಷನಂತೆ ಜೀವಿಸಲು ಆರಂಭಿಸಿದಳು. ಪ್ರಸ್ತುತ ಕೆನಡಾದ ಕ್ಯಾಲ್ಗರಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನು ಬಾಂಗ್ಲಾದೇಶದ ಮಹಿಳೆಯಾದ ಟೀನಾ ದಾಸ್ (39) 4 ವರ್ಷಗಳ ಕಾಲ ತನ್ನ ಪತಿಯೊಂದಿಗೆ ವಾಸಿಸಿದ ನಂತರ ಅವಳು "ಲೆಸ್ಬಿಯನ್" ಎಂದು ಅರಿತುಕೊಂಡಳು. ಹಾಗಾಗಿ ಆಕೆ ಗಂಡನಿಂದ ಪರಿತ್ಯಕ್ತಗೊಂಡಳು. ಕ್ಯಾಲ್ಗರಿಯ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ.
ಸುಭೀಕ್ಷಾ ಮತ್ತು ಟೀನಾ ಕೆನಡಾದಲ್ಲೇ ಇದ್ದ ಕಾರಣ ಮೊಬೈಲ್ ಆ್ಯಪ್ ಮೂಲಕ ಇಬ್ಬರೂ ಪರಿಚಯವಾಗಿದ್ದಾರೆ. ಬಳಿಕ ಇಬ್ಬರೂ ಸಂಧಿಸಿದ್ದಾರೆ. ಹಲವು ವರ್ಷಗಳು ಒಟ್ಟಿಗೆ ಜೀವಿಸಿರುವ ಇವರು ಬಳಿಕ ವಿವಾಹವಾಗಲು ಇಚ್ಚಿಸಿದ್ದಾರೆ. ಬಳಿಕ ಸುಭಿಕ್ಷಾ ತಾನು ಹೆಣ್ಣಾಗಿದ್ದರೂ, ಗಂಡಸಿನ ಭಾವನೆಗಳನ್ನು ಹೊಂದಿದ್ದೇನೆ. ಟೀನಾಳನ್ನು ವಿವಾಹವಾಗುವ ಕುರಿತಾಗಿ ಹೇಳಿದಾಗ ಮೊದಮೊದಲು ವಿರೋಧಿಸಿದ ಕುಟುಂಬ ಬಳಿಕ ಒಪ್ಪಿಕೊಂಡಿದೆ.