ಶಿಮ್ಲಾ(ಹಿಮಾಚಲ ಪ್ರದೇಶ): ಚಿರತೆಯೊಂದು ಆರು ವರ್ಷದ ಬಾಲಕನನ್ನು ಹೊತ್ತೊಯ್ದಿರುವ ಘಟನೆ ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ನಗರದ ಡೌನ್ ಡೇಲ್ ಕಾಲೋನಿಯಲ್ಲಿ ನಡೆದಿದೆ.
ಪೊಲೀಸರು ಮತ್ತು ಅರಣ್ಯ ಇಲಾಖೆಗೆ ಪೊಲೀಸರು ಮಾಹಿತಿ ನೀಡಿದ್ದು, ಎರಡೂ ಇಲಾಖೆಗಳ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಗುರುವಾರ ಮಧ್ಯರಾತ್ರಿಯವರೆಗೂ ಹಾಗೂ ಬೆಳಗ್ಗೆ ಶೋಧ ನಡೆಸಲಾಗಿದ್ದು, ಬಾಲಕನನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಜಿಲ್ಲೆಯ ಉಪ ಪೊಲೀಸ್ ವರಿಷ್ಠಾಧಿಕಾರಿ ಕಮಲ್ ವರ್ಮಾ ಮಾಹಿತಿ ನೀಡಿದರು.
ಚಿರತೆ ಹಾವಳಿ ಶಿಮ್ಲಾದಲ್ಲಿ ಇದೇ ಮೊದಲಲ್ಲ. ಎರಡು ತಿಂಗಳ ಹಿಂದೆ ನಗರದ ಕನಲೋಗ್ ಪ್ರದೇಶದಲ್ಲಿ ಎಂಟು ವರ್ಷದ ಬಾಲಕನನ್ನು ಚಿರತೆ ಹೊತ್ತೊಯ್ದಿತ್ತು. ಅದೇ ದಿನ ಬಾಲಕನಿಗಾಗಿ ಹುಡುಕಾಟ ಆರಂಭಿಸಿದ್ದರೂ ಕೂಡಾ ಪತ್ತೆ ಮಾಡಲು ಆಗಿರಲಿಲ್ಲ. ಆದರೆ ಮರುದಿನ ಬಾಲಕನ ಶವ ಪತ್ತೆಯಾಗಿತ್ತು.
ಶಿಮ್ಲಾ ನಗರದ ಸಂಜೌಲಿ, ಛೋಟಾ ಶಿಮ್ಲಾ ಮತ್ತು ಸಮ್ಮರ್ ಹಿಲ್ ಪ್ರದೇಶಗಳಲ್ಲಿ ಚಿರತೆಗಳ ಹಾವಳಿ ಸಾಮಾನ್ಯವಾಗಿದೆ. ಮನೆಗಳ ಹೊರಗೆ ಅಳವಡಿಸಲಾದ ಸಿಸಿ ಕೆಮರಾಗಳಲ್ಲಿ ಚಿರತೆಯ ಓಡಾಟ ಸೆರೆಯಾಗಿದೆ. ಈಗ ಬಾಲಕನನ್ನು ಚಿರತೆ ಹೊತ್ತೊಯ್ದಿದ್ದು, ಆತಂಕದಲ್ಲಿ ಜನರಿದ್ದಾರೆ. ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಆ ಚಿರತೆಯನ್ನು ಹಿಡಿಯುವ ಮೂಲಕ ಆತಂಕ ಹೋಗಲಾಡಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಮತದಾರ ಪಾಠ ಕಲಿಸಿದ್ದಾನೆ: ತೈಲ ದರ ಇಳಿಸಿದ ಬಿಜೆಪಿ ವಿರುದ್ಧ ಶಿವಸೇನೆ ಟೀಕೆ