ಗರ್ವಾ (ಜಾರ್ಖಂಡ್): ಚಿರತೆ ದಾಳಿಗೆ ಏಳು ವರ್ಷದ ಬಾಲಕಿಯೊಬ್ಬಳು ಬಲಿಯಾದ ಘಟನೆ ಜಾರ್ಖಂಡ್ನ ಗರ್ವಾ ಜಿಲ್ಲೆಯಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಸೋನಿ ಕುಮಾರಿ ಎಂದು ಗುರುತಿಸಲಾಗಿದೆ.
ಇಲ್ಲಿನ ರಂಕಾ ಪೊಲೀಸ್ ಠಾಣೆ ವ್ಯಾಪ್ತಿಯ ಸೇವಾದಿಹ್ ಗ್ರಾಮದ ನಿವಾಸಿ ಸೋನಿ ಸೋಮವಾರ ರಾತ್ರಿ ತಾಯಿಗೊಂದಿಗೆ ಬಹಿರ್ದೆಸೆಗೆ ಹೋಗಿದ್ದಳು. ಈ ವೇಳೆ ಚಿರತೆ ದಾಳಿ ಮಾಡಿದೆ. ಬಾಲಕಿಯನ್ನು ಕೊಂದ ನಂತರ ಚಿರತೆ ಶವವನ್ನು ಎಳೆದುಕೊಂಡು ಹೋಗಲು ಯತ್ನಿಸಿದೆ. ಆಗ ಬಾಲಕಿಯ ತಾಯಿ ಮತ್ತು ಘಟನೆಯ ಮಾಹಿತಿ ಪಡೆದು ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು ಚಿರತೆಯನ್ನು ಓಡಿಸಿದ್ದಾರೆ.
ಇದರಿಂದ ಚಿರತೆಯು ಬಾಲಕಿಯ ಶವವನ್ನು ಬಿಟ್ಟು ಓಡಿ ಹೋಗಿದೆ. ಇತ್ತ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸೋಮವಾರ ತಡರಾತ್ರಿಯೇ ಗ್ರಾಮಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಚಿರತೆಗೆ ಬಾಲಕಿ ಬಲಿಯಾದ ಬಳಿಕ ಈ ಪ್ರದೇಶದಲ್ಲಿ ಚಿರತೆ ಭೀತಿ ಹೆಚ್ಚಾಗಿದೆ.
ಗರ್ವಾ ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಲ್ಲಿ ಇದುವರೆಗೆ ನಾಲ್ಕು ಜನರ ಮೇಲೆ ಚಿರತೆ ದಾಳಿ ಮಾಡಿದೆ. ಇಬ್ಬರು ಹುಡುಗಿಯರು, ಒಬ್ಬ ಮಹಿಳೆ ಮತ್ತು ಪುರುಷನ ಮೇಲೆ ಚಿರತೆ ದಾಳಿ ನಡೆದಿದೆ. ಇದರಲ್ಲಿ ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದಾರೆ. ಕೆಲ ದಿನಗಳ ಹಿಂದೆ ಕೂಡ ಐದು ವರ್ಷದ ಬಾಲಕಿಯನ್ನು ಚಿರತೆ ಕೊಂದು ಹಾಕಿತ್ತು. ಹೀಗಾಗಿ ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಬಲೆ, ಬೋನುಗಳನ್ನು ಅಳವಡಿಸಿದ್ದಾರೆ.
ಇದನ್ನೂ ಓದಿ:ಲ್ಯಾಬ್‌ಗೆ ನುಗ್ಗಿದ ಚಿರತೆ ಸೆರೆ ಸಿಕ್ಕಿದ್ದು ಹೇಗೆ ನೋಡಿ! VIDEO