ಮುಂಬೈ:ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣದ ಶಿವಸೇನೆಗೆ ಮತ್ತೊಂದು ಆಘಾತ ಉಂಟಾಗಿದೆ. ಉದ್ಧವ್ ಆಪ್ತ ಬಣದಲ್ಲಿದ್ದ ವಿಧಾನಪರಿಷತ್ ಉಪಸಭಾಪತಿ, ಎಂಎಲ್ಸಿ ನೀಲಂ ಗೊರ್ಹೆ ಅವರು ಸಿಎಂ ಏಕನಾಥ್ ಶಿಂಧೆ ಅವರ ಬಣಕ್ಕೆ ಜಿಗಿದಿದ್ದಾರೆ. ಕಳೆದ ತಿಂಗಳಷ್ಟೇ ಶಾಸಕಿ ಮನೀಶಾ ಕಾಯಂದೆ ಅವರು ಬಣ ತೊರೆದ ಬಳಿಕ ಇದು ಮತ್ತೊಬ್ಬ ನಾಯಕಿಯ ನಿರ್ಗಮನವಾಗುತ್ತಿರುವುದು ಠಾಕ್ರೆ ಬಣಕ್ಕೆ ತೀವ್ರ ಹಿನ್ನಡೆ ಉಂಟು ಮಾಡಿದೆ.
ಶಿವಸೇನೆಯ ಸಿಎಂ ಏಕನಾಥ್ ಶಿಂಧೆ ನೇತೃತ್ವದಲ್ಲಿ 35 ಕ್ಕೂ ಅಧಿಕ ಶಾಸಕರು ಉದ್ಧವ್ ಠಾಕ್ರೆ ಅವರ ವಿರುದ್ಧ ಬಂಡೆದ್ದು ಮೂಲ ಪಕ್ಷದಿಂದ ದೂರ ಸರಿದು ಬಿಜೆಪಿ ಜೊತೆಗೆ ಕೈಜೋಡಿಸಿ ಸರ್ಕಾರ ರಚನೆ ಮಾಡಿದ್ದರು. ಇದರಿಂದ ಮಹಾ ಅಘಾಡಿ ಸರ್ಕಾರ ಪತನಗೊಂಡಿತ್ತು. ಅದಾದ ಬಳಿಕ ನಡೆದ ರಾಜಕೀಯ ವಿಪ್ಲವಗಳಲ್ಲಿ ಶಿಂಧೆ ಬಣವನ್ನೇ ಮೂಲ ಶಿವಸೇನೆ ಎಂದು ಕೋರ್ಟ್ ತೀರ್ಪು ನೀಡಿತ್ತು. ಇದರಿಂದ ಪಕ್ಷ ಮತ್ತು ಚಿಹ್ನೆಯನ್ನು ಶಿಂಧೆ ಬಣ ಪಡೆದುಕೊಂಡಿತು.
ಇದಾದ ಬಳಿಕ ಠಾಕ್ರೆ ಬಣದ ಒಬ್ಬೊಬ್ಬ ಶಾಸಕರು, ನಾಯಕರು, ಕಾರ್ಯಕರ್ತರು ಸಿಎಂ ಏಕನಾಥ್ ಶಿಂಧೆ ಬಣಕ್ಕೆ ಜಂಪ್ ಆಗುತ್ತಿದ್ದಾರೆ. ಇದೀಗ ಉಪಸಭಾಪತಿ ನೀಲಂ ಗೊರ್ಹೆ ಅವರ ಸರದಿಯಾಗಿದೆ. ನೀಲಂ ಅವರು ಶಿಂಧೆ ಬಣ ಸೇರಿದ್ಧಾರೆ. ಫಡ್ನವೀಸ್ ಸರ್ಕಾರದ ಮೊದಲ ಅಧಿವೇಶನದಲ್ಲಿ ಆಡಳಿತ ಪಕ್ಷಗಳು ಆದಿತ್ಯ ಠಾಕ್ರೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದವು. ಈ ವೇಳೆ ಠಾಕ್ರೆ ಗುಂಪಿನ ಶಾಸಕರಿಗೆ ಇದರ ವಿರುದ್ಧ ಮಾತನಾಡಲು ನೀಲಂ ಗೋರ್ಹೆ ಅವರು ಸದನದಲ್ಲಿ ಅವಕಾಶ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು.