ನವದೆಹಲಿ:ದೇಶದಲ್ಲಿ ನಕ್ಸಲ್ ಹಿಂಸಾಚಾರ ಘಟನೆಗಳು ಶೇ.77 ರಷ್ಟು ಕಡಿತಗೊಂಡಿವೆ. ಇದು 2009 ರ ಬಳಿಕ ಭಾರಿ ಪ್ರಮಾಣದ ಇಳಿಕೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ನಕ್ಸಲ್ ಹಿಂಸಾಚಾರದ ಘಟನೆಗಳು 2009 ರಲ್ಲಿ 2,258 ಇದ್ದವು. ಇದು 2021ರ ವೇಳೆಗೆ 509 ಕ್ಕಿಳಿದಿದೆ ಎಂದರು.
ನಕ್ಸಲ್ ನಿಗ್ರಹಕ್ಕಾಗಿ 2015 ರಲ್ಲಿ ಅನುಷ್ಠಾನ ಮಾಡಲಾದ 'ರಾಷ್ಟ್ರೀಯ ನೀತಿ ಮತ್ತು ಕ್ರಿಯಾ ಯೋಜನೆ'ಯ ಪರಿಣಾಮವಾಗಿ ಹಿಂಸಾಚಾರ ಕೃತ್ಯಗಳಲ್ಲಿ ಸ್ಥಿರವಾದ ಇಳಿಕೆ ಕಂಡುಬಂದಿದೆ. ಎಡಪಂಥೀಯ ಉಗ್ರಗಾಮಿ ಹಿಂಸಾಚಾರಗಳು 2009 ರಲ್ಲಿ ಸಾರ್ವಕಾಲಿಕ ಅಂದರೆ 2,258 ರಷ್ಟು ದಾಖಲಾಗಿವೆ. 2021 ರಲ್ಲಿ ಇವು 509 ಮಾತ್ರ ನಡೆದಿವೆ. 77 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ಮಾಹಿತಿ ಒದಗಿಸಿದರು.