ನವದೆಹಲಿ: ಶುಕ್ರವಾರದಂದು ಟಿ20 ವಿಶ್ವಕಪ್‌ನಿಂದ ಭಾರತ ತಂಡ ನಿರ್ಗಮಿಸಿದ ನಂತರ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹೃದಯಸ್ಪರ್ಶಿ ಸಂದೇಶವೊಂದನ್ನು ಶೇರ್ ಮಾಡಿದ್ದು, ಈ ಮೆಗಾ ಈವೆಂಟ್‌ನಲ್ಲಿ ತಂಡವನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.
T20 ವಿಶ್ವಕಪ್‌ನ ಫೈನಲ್‌ಗೆ ತಲುಪಲು ವಿಫಲವಾದ ನಂತರ ಟೀಂ ಇಂಡಿಯಾ ಮಾಜಿ ನಾಯಕ ಕೊಹ್ಲಿ ನಿರಾಶೆ ವ್ಯಕ್ತಪಡಿಸಿದ್ದಾರೆ. ಆದರೆ ಪಂದ್ಯಾವಳಿಯು ತಂಡಕ್ಕೆ ಕೆಲವು ಸ್ಮರಣೀಯ ಕ್ಷಣಗಳನ್ನು ನೀಡಿದೆ ಮತ್ತು ತಂಡ ಮತ್ತೆ ಸುಧಾರಿಸಲಿದೆ ಎಂದು ಹೇಳಿದ್ದಾರೆ.
ನಾವು ನಮ್ಮ ಕನಸು ಸಾಕಾರ ಮಾಡಿಕೊಳ್ಳದೆ ಮತ್ತು ನಮ್ಮ ಹೃದಯದಲ್ಲಿ ನಿರಾಸೆಯೊಂದಿಗೆ ಆಸ್ಟ್ರೇಲಿಯಾದಿಂದ ಹೊರಡುತ್ತಿದ್ದೇವೆ. ಆದರೆ, ನಾವು ಒಂದು ತಂಡವಾಗಿ ಅನೇಕ ಸ್ಮರಣೀಯ ಕ್ಷಣಗಳನ್ನು ತೆಗೆದುಕೊಂಡು ಹೊರಡುತ್ತಿದ್ದೇವೆ ಮತ್ತು ಇಲ್ಲಿಂದ ಮುಂದೆ ಮತ್ತಷ್ಟು ಉತ್ತಮವಾಗುವ ಗುರಿಯನ್ನು ಹೊಂದಲಿದ್ದೇವೆ ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.
ತಂಡವನ್ನು ಬೆಂಬಲಿಸಲು ಕ್ರೀಡಾಂಗಣಗಳಿಗೆ ಆಗಮಿಸಿದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ಅವರು, ಭಾರತೀಯ ಜೆರ್ಸಿಯನ್ನು ಧರಿಸಿ ದೇಶವನ್ನು ಪ್ರತಿನಿಧಿಸುವುದು ಹೆಮ್ಮೆಯ ವಿಷಯ ಎಂದು ಹೇಳಿದರು. ಕ್ರೀಡಾಂಗಣಗಳಲ್ಲಿ ನಮ್ಮನ್ನು ಬೆಂಬಲಿಸಲು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ ನಮ್ಮ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು. ಈ ಜೆರ್ಸಿಯನ್ನು ಧರಿಸಲು ಮತ್ತು ನಮ್ಮ ದೇಶವನ್ನು ಪ್ರತಿನಿಧಿಸಲು ಯಾವಾಗಲೂ ಹೆಮ್ಮೆಪಡುತ್ತೇನೆ ಎಂದು ವಿರಾಟ್ ಟ್ವೀಟ್ ಮೂಲಕ ಹೇಳಿದ್ದಾರೆ.
ಬಲಗೈ ಬ್ಯಾಟ್ಸ್‌ಮನ್ ವಿರಾಟ್, ಗುರುವಾರದಂದು ಟಿ20 ವಿಶ್ವಕಪ್‌ನಲ್ಲಿ 1,100 ರನ್ ಪೂರೈಸಿದ ಮೊದಲ ಬ್ಯಾಟರ್ ಎನಿಸಿಕೊಂಡರು. ಅಡಿಲೇಡ್ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ICC T20 ವಿಶ್ವಕಪ್‌ನ ಭಾರತದ ಸೆಮಿಫೈನಲ್ ಪಂದ್ಯದಲ್ಲಿ ಅವರು ಈ ಮೈಲಿಗಲ್ಲು ಸಾಧಿಸಿದರು.
ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿ ತನ್ನ ಅಭಿಯಾನವನ್ನು ಮುಗಿಸಿದೆ. ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಹಾರ್ದಿಕ್ ಪಾಂಡ್ಯ (33 ಎಸೆತಗಳಲ್ಲಿ 63) ಮತ್ತು ವಿರಾಟ್ ಕೊಹ್ಲಿ (40 ಎಸೆತಗಳಲ್ಲಿ 50) ಮೆನ್ ಇನ್ ಬ್ಲೂ ಬ್ಯಾಟ್‌ನೊಂದಿಗೆ ಸ್ಟಾರ್ ಎನಿಸಿದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 61 ರನ್‌ಗಳ ಮಹತ್ವದ ಜೊತೆಯಾಟ ನೀಡಿದರು.
ವೇಗಿ ಕ್ರಿಸ್ ಜೋರ್ಡಾನ್ 3/43 ಮೂಲಕ ಉತ್ತಮ ಪ್ರದರ್ಶನ ನೀಡಿದರು. ಆದಿಲ್ ರಶೀದ್ ಮತ್ತು ಕ್ರಿಸ್ ವೋಕ್ಸ್ ತಲಾ ಒಂದು ವಿಕೆಟ್ ಪಡೆದರು. 169 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಮೊದಲ ಓವರ್‌ನಿಂದಲೇ ಭಾರತೀಯ ಬೌಲರ್‌ಗಳ ಮೇಲೆ ಒತ್ತಡ ಹೇರಿತು. ಜೋಸ್ ಬಟ್ಲರ್ (80*) ಮತ್ತು ಅಲೆಕ್ಸ್ ಹೇಲ್ಸ್ (86*) ತಂದಿತ್ತ ದಾಳಿಗೆ ಭಾರತದ ಬಳಿ ಉತ್ತರವಿರಲಿಲ್ಲ. ಇಂಗ್ಲೆಂಡ್ ನಾಲ್ಕು ಓವರ್‌ಗಳು ಬಾಕಿ ಇರುವಂತೆಯೇ ಎಲ್ಲ ಹತ್ತು ವಿಕೆಟ್ ಉಳಿಸಿಕೊಂಡು ಗೆಲುವು ಸಾಧಿಸಿತು.
ಹೇಲ್ಸ್ (47 ಎಸೆತಗಳಲ್ಲಿ 86*) ‘ಪಂದ್ಯ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ: ಟಿ20 ವಿಶ್ವಕಪ್ ಸೋಲಿನ ಹತಾಶೆ: ವಿಶ್ರಾಂತಿಗೆ ತೆರಳಿದ ಮುಖ್ಯ ಕೋಚ್ ದ್ರಾವಿಡ್!