ಹೈದರಾಬಾದ್ (ತೆಲಂಗಾಣ): ನೆರೆಯ ತೆಲಂಗಾಣದಲ್ಲೂ ನೇಮಕಾತಿ ಹರಗಣ ಬೆಳಕಿಗೆ ಬಂದಿದ್ದು, ತೆಲಂಗಾಣ ಲೋಕಸೇವಾ ಆಯೋಗ (ಟಿಎಸ್‌ಪಿಎಸ್‌ಸಿ) ನಡೆಸಿದ್ದ ಸಹಾಯಕ ಎಂಜಿನಿಯರ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಒಂಬತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಪ್ರವೀಣ್ ಕುಮಾರ್, ರಾಜಶೇಖರ್, ರೇಣುಕಾ, ಢಾಕ್ಯಾ ನಾಯ್ಕ್, ಕೆ.ರಾಜೇಶ್ವರ ನಾಯ್ಕ್, ಕೆ.ನೀಲೇಶ್ ನಾಯ್ಕ್, ಪಿ.ಗೋಪಾಲನಾಯ್ಕ್, ಕೆ.ಶ್ರೀನಿವಾಸ್, ಕೆ.ರಾಜೇಂದ್ರನಾಯಕ್ ಎಂದು ಗುರುತಿಸಲಾಗಿದೆ.
ಮಾರ್ಚ್ 5ರಂದು ಟಿಎಸ್‌ಪಿಎಸ್‌ಸಿ ಸಹಾಯಕ ಎಂಜಿನಿಯರ್ (ಎಇ) ನೇಮಕಾತಿ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಗೆ ಅಂದಾಜು 25 ಸಾವಿರ ಅಭ್ಯರ್ಥಿಗಳು ಹಾಜರಾಗಿದ್ದರು. ಆದರೆ, ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಟಿಎಸ್‌ಪಿಎಸ್‌ಸಿಯ ಆಡಳಿತದ ವಿಭಾಗದ ಸಹಾಯಕ ಕಾರ್ಯದರ್ಶಿ ಹೈದರಾಬಾದ್ನ ಬೇಗಂಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ದೂರಿನ ಮೇರೆಗೆ ಬೇಗಂ ಬಜಾರ್ ಪೊಲೀಸರು ಮತ್ತು ಕೇಂದ್ರ ವಲಯ ಟಾಸ್ಕ್ ಫೋರ್ಸ್ ತಂಡ ಜಂಟಿ ಕಾರ್ಯಾಚರಣೆ ನಡೆಸಿ, ಪ್ರಮುಖ ಆರೋಪಿಗಳು ಸೇರಿ ಒಂಬತ್ತು ಜನರನ್ನು ಬಂಧಿಸಲಾಗಿದೆ. ಈ ಗ್ಯಾಂಗ್‌ನಲ್ಲಿ ಟಿಎಸ್‌ಪಿಎಸ್‌ಸಿಯ ನೆಟ್‌ವರ್ಕ್ ಅಡ್ಮಿನ್ ಮತ್ತು ಸೈಬರಾಬಾದ್ ಕಮಿಷನರೇಟ್‌ನ ಮೇಡ್ಚಲ್ ಠಾಣೆ ಪೊಲೀಸ್ ಕಾನ್ಸ್ಟೇಬಲ್ ಸೇರಿದ್ದಾರೆ. ಅಲ್ಲದೇ, ನಾಲ್ಕು ಪೆನ್ ಡ್ರೈವ್, ಮೂರು ಲ್ಯಾಪ್ ಟಾಪ್, ಕಂಪ್ಯೂಟರ್, ಐದು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ವಿಧಿವಿಜ್ಞಾನ ತಂಡಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಹಿನ್ನೆಲೆ:ಸದ್ಯ ಬಂಧಿತ ಆರೋಪಿಗಳ ಪೈಕಿ ಐವರು ಸರ್ಕಾರಿ ನೌಕರರು, ಇಬ್ಬರು ಅಭ್ಯರ್ಥಿಗಳು ಕೂಡ ಸೇರಿದ್ದಾರೆ. 32 ವರ್ಷದ ಪ್ರವೀಣ್ ಕುಮಾರ್ ಪ್ರಮುಖ ಆರೋಪಿ ಎನ್ನಲಾಗುತ್ತಿದ್ದು, ಈತ ಆಯೋಗದ ಸಹಾಯಕ ವಿಭಾಗ ಅಧಿಕಾರಿ. ಮತ್ತೊಬ್ಬ ಆಯೋಗದಲ್ಲಿ ನೆಟ್‌ವರ್ಕ್ ಅಡ್ಮಿನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ 35 ವರ್ಷದ ಅಟ್ಲಾ ರಾಜಶೇಖರ್ ರೆಡ್ಡಿ ಕೂಡ ಪ್ರಮುಖ ಆರೋಪಿಯಾಗಿದ್ದಾನೆ. 35 ವರ್ಷದ ಶಿಕ್ಷಕಿ ರೇಣುಕಾ ಮತ್ತು ವಿಕಾರಾಬಾದ್ ಜಿಲ್ಲಾ ಕಂದಾಯ ಇಲಾಖೆಯಲ್ಲಿ ತಾಂತ್ರಿಕ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಆಕೆಯ 38 ವರ್ಷದ ಪತಿ ಢಾಕ್ಯಾ ನಾಯ್ಕ್, ಮೇಡ್ಚಲ್ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಕೆ.ಶ್ರೀನಿವಾಸ್ (30) ಸಹ ಸೇರಿದ್ದಾರೆ.