ನವದೆಹಲಿ :2001ರಲ್ಲಿ ಸಂಸತ್ ಮೇಲೆ ನಡೆದ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದವರಿಗೆ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯರು ನಮನ ಸಲ್ಲಿಸಿದ್ದಾರೆ.
'2001ರಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿ ವೇಳೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಸಂಸತ್ತನ್ನು ರಕ್ಷಣೆಗೆ ತಮ್ಮ ಪ್ರಾಣ ಅರ್ಪಿಸಿದ ಕೆಚ್ಚೆದೆಯ ಭದ್ರತಾ ಸಿಬ್ಬಂದಿಗೆ ಈ ದಿನದಂದು ನಾನು ಗೌರವ ಸಲ್ಲಿಸುತ್ತೇನೆ. ಹುತಾತ್ಮರ ಅತ್ಯುನ್ನತ ತ್ಯಾಗವನ್ನು ರಾಷ್ಟ್ರವು ಎಂದಿಗೂ ಕೃತಜ್ಞರಾಗಿರಬೇಕು' ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.
'2001ರಲ್ಲಿನ ಸಂಸತ್ ಮೇಲಿನ ದಾಳಿ ಸಂದರ್ಭದಲ್ಲಿ ಹೋರಾಡಿ ಹುತಾತ್ಮರಾದ ಎಲ್ಲಾ ಭದ್ರತಾ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ರಾಷ್ಟ್ರಕ್ಕೆ ಅವರ ಸೇವೆ ಅತ್ಯುನ್ನತ, ಸೇನೆಯ ತ್ಯಾಗವು ಪ್ರತಿಯೊಬ್ಬ ನಾಗರಿಕರಿಗೆ ಸ್ಫೂರ್ತಿ' ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಸ್ಮರಿಸಿದ್ದಾರೆ.
ಹಾಗೆಯೇ 'ಭಾರತೀಯ ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ ಭವನದ ಮೇಲಿನ ಹೇಡಿತನದ ಭಯೋತ್ಪಾದಕ ದಾಳಿಯಲ್ಲಿ ರಾಷ್ಟ್ರದ ಹೆಮ್ಮೆಯನ್ನು ರಕ್ಷಿಸಲು ತಮ್ಮ ಸರ್ವೋಚ್ಚ ತ್ಯಾಗವನ್ನು ಮಾಡಿದ ಎಲ್ಲ ಕೆಚ್ಚೆದೆಯ ಭದ್ರತಾ ಪಡೆಗಳ ಧೈರ್ಯ ಮತ್ತು ಶೌರ್ಯಕ್ಕೆ ನಾನು ವಂದಿಸುತ್ತೇನೆ. ನಿಮ್ಮ ಅಪ್ರತಿಮ ಶೌರ್ಯ ಮತ್ತು ಅಮರ ತ್ಯಾಗ ಯಾವಾಗಲೂ ರಾಷ್ಟ್ರದ ಸೇವೆ ಮಾಡಲು ನಮಗೆ ಸ್ಫೂರ್ತಿ ನೀಡುತ್ತದೆ' ಎಂದು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮೂಲಕ ತಿಳಿಸಿದ್ದಾರೆ.
2001ರ ಡಿಸೆಂಬರ್ 13ರಂದು ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಗಳು ಮುಂದೂಡಿಕೆಯಾದ 40 ನಿಮಿಷಗಳ ಬಳಿಕ ಸಂಸತ್ ಆವರಣದಲ್ಲಿ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್- ಇ -ತೊಯ್ಬಾ (ಎಲ್‌ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಎಂ) ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಸಂಸತ್ ಭವನದಲ್ಲಿ 100 ಸದಸ್ಯರು ಉಪಸ್ಥಿತರಿದ್ದರು. ಉಗ್ರರ ವಿರುದ್ಧ ಹೋರಾಡುವ ವೇಳೆ ಪೊಲೀಸರು, ಸಂಸತ್ತಿನ ಸಿಬ್ಬಂದಿ ಸೇರಿ 14 ಮಂದಿ ಹುತಾತ್ಮರಾಗಿದ್ದರು.
ಇದನ್ನೂ ಓದಿ:ಹರ್ನಾಝ್ ಸಂಧುಗೆ ಭುವನ ಸುಂದರಿ ಕಿರೀಟ.. 21 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಅದೃಷ್ಟ