ನವದೆಹಲಿ :2001ರಲ್ಲಿ ಸಂಸತ್ ಮೇಲೆ ನಡೆದ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದವರಿಗೆ ಇಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ನಮನ ಸಲ್ಲಿಸಿದ್ದಾರೆ.
"2001ರಲ್ಲಿ ಈ ದಿನದಂದು ಸಂಸತ್ತನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಅರ್ಪಿಸಿದ ಕೆಚ್ಚೆದೆಯ ಹುತಾತ್ಮರನ್ನು ರಾಷ್ಟ್ರವು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತದೆ. ನಮ್ಮ ಪ್ರಜಾಪ್ರಭುತ್ವದ ದೇವಾಲಯದ ರಕ್ಷಕರ ಮಹತ್ತರ ತ್ಯಾಗವನ್ನು ಸ್ಮರಿಸುವ ಈ ವೇಳೆ ಭಯೋತ್ಪಾದಕ ಶಕ್ತಿಗಳನ್ನು ಸೋಲಿಸುವ ನಮ್ಮ ಸಂಕಲ್ಪವನ್ನು ನಾವು ಮತ್ತಷ್ಟು ಬಲಪಡಿಸಿಕೊಳ್ಳುತ್ತೇವೆ" ಎಂದು ರಾಷ್ಟ್ರಪತಿ ಕೋವಿಂದ್ ಟ್ವೀಟ್ ಮಾಡಿದ್ದಾರೆ.
ಟ್ವೀಟ್ ಮಾಡಿ ಹುತಾತ್ಮರನ್ನು ಸ್ಮರಿಸಿರುವ ಪಿಎಂ ಮೋದಿ, "ನಮ್ಮ ಸಂಸತ್ತಿನ ಮೇಲಿನ ಹೇಡಿತನದ ದಾಳಿಯನ್ನು ನಾವು ಎಂದಿಗೂ ಮರೆಯುವುದಿಲ್ಲ. ನಮ್ಮ ಸಂಸತ್ತನ್ನು ರಕ್ಷಿಸುವ ವೇಳೆ ಪ್ರಾಣ ಕಳೆದುಕೊಂಡವರ ಶೌರ್ಯ ಮತ್ತು ತ್ಯಾಗವನ್ನು ನಾವು ನೆನಪಿಸಿಕೊಳ್ಳುತ್ತೇವೆ. ಭಾರತ ಅವರಿಗೆ ಯಾವಾಗಲೂ ಕೃತಜ್ಞರಾಗಿರಬೇಕು" ಎಂದು ಹೇಳಿದ್ದಾರೆ.