ನವದೆಹಲಿ:ಪುಲ್ವಾಮಾ ಭಯೋತ್ಪಾದಕ ದಾಳಿ ನಡೆದು ಇಂದಿಗೆ ಎರಡು ವರ್ಷಗಳು ಸಂದಿದ್ದು, ದಾಳಿಯಲ್ಲಿ ಪ್ರಾಣ ಕಳೆದುಕೊಂಡ 40 ಸಿಆರ್‌ಪಿಎಫ್ ಯೋಧರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಗಣ್ಯರು ನಮಿಸಿದ್ದಾರೆ.
2019 ರಲ್ಲಿ ಈ ದಿನ ನಡೆದ ಭೀಕರ ಪುಲ್ವಾಮಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಧೈರ್ಯಶಾಲಿ ಯೋಧರಿಗೆ ನಾನು ನಮಸ್ಕರಿಸುತ್ತೇನೆ. ಭಾರತವು ನಿಮ್ಮ ಅಸಾಧಾರಣ ಧೈರ್ಯ ಮತ್ತು ತ್ಯಾಗವನ್ನು ಎಂದಿಗೂ ಮರೆಯುವುದಿಲ್ಲ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ಕೆಚ್ಚೆದೆಯ ಸೈನಿಕರಿಗೆ ನನ್ನ ನಮನಗಳು. ನಿಮ್ಮ ಕುಟುಂಬಗಳಿಗೆ ದೇಶವು ಋಣಿಯಾಗಿರುತ್ತದೆ ಎಂದು ಹಿಂದಿಯಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಭಾರತಾಂಬೆಯ ಧೈರ್ಯಶಾಲಿ ಪುತ್ರರಿಗೆ ನಾನು ನಮಿಸುತ್ತೇನೆ. ರಾಷ್ಟ್ರವು ಅವರ ಅದಮ್ಯ ಧೈರ್ಯ ಮತ್ತು ಶೌರ್ಯಕ್ಕೆ ಯಾವಾಗಲೂ ಋಣಿಯಾಗಿರುತ್ತದೆ ಎಂದು ಜೆ.ಪಿ. ನಡ್ಡಾ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಪುಲ್ವಾಮಾ ದಾಳಿಯ ಮಾಸದ ನೆನಪು: ಆ ಕರಾಳ ದಿನಕ್ಕೆ ಎರಡು ವರ್ಷ
ರಾಷ್ಟ್ರಕ್ಕೆ ಯೋಧರು ಮಾಡಿದ ಸೇವೆ ಮತ್ತು ಅವರ ಪರಮ ತ್ಯಾಗವನ್ನು ಭಾರತ ಎಂದಿಗೂ ಮರೆಯುವುದಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
2019ರ ಫೆಬ್ರವರಿ 14 ರಂದು ಸ್ಫೋಟಕ ತುಂಬಿದ ವಾಹನವನ್ನು ಸಿಆರ್‌ಪಿಎಫ್ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ಗೆ ಡಿಕ್ಕಿ ಹೊಡೆಸಿ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದರು. ಘಟನೆಯಲ್ಲಿ 40 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಹಲವರು ಗಾಯಗೊಂಡಿದ್ದರು. ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯಾದ ಜೈಷ್-ಎ-ಮೊಹಮ್ಮದ್ ದಾಳಿಯ ಹೊಣೆ ಹೊತ್ತಿತ್ತು. ಇದಕ್ಕೆ ಪ್ರತಿಯಾಗಿ ಬಾಲಕೋಟ್ನಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ವಾಯುದಾಳಿ ನಡೆಸಿ, ಸುಮಾರು 100 ಉಗ್ರರನ್ನು ಭಾರತೀಯ ಸೇನೆ ಬೇಟೆಯಾಡಿ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿತ್ತು.