ಕರ್ನಾಟಕ

karnataka

ETV Bharat / bharat

ಕೇಂದ್ರವನ್ನು ಕಟ್ಟಿ ಹಾಕಲು ವಿಪಕ್ಷಗಳು ಸನ್ನದ್ಧ.. 11 ಬೇಡಿಕೆಗಳನ್ನು ಮುಂದಿಟ್ಟ ಸೋನಿಯಾ ಟೀಂ! - ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ

2024ರ ಲೋಕಸಭಾ ಚುನಾವಣೆಯಲ್ಲಿ ಶತಾಯಗತಾಯ ಮೋದಿ ಸರ್ಕಾರವನ್ನು ಮನೆಗೆ ಕಳುಹಿಸಲು ಪಣ ತೊಟ್ಟಿರುವ 20 ವಿಪಕ್ಷಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.

Sonia Gandhi
Sonia Gandhi

By

Published : Aug 20, 2021, 10:44 PM IST

ಹೈದರಾಬಾದ್: ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ಇಂದು ನಡೆದ ವಿಪಕ್ಷ ನಾಯಕರ ಸಭೆಯ ನಂತರ, 20 ವಿಪಕ್ಷಗಳ ನಾಯಕರು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಜಂಟಿ ಹೇಳಿಕೆಯು ಕೇಂದ್ರ ಸರ್ಕಾರವನ್ನು ತೀವ್ರವಾಗಿ ಖಂಡಿಸಿವೆ.

ಮುಂಗಾರು ಅಧಿವೇಶನದಲ್ಲಿ ಪೆಗಾಸಸ್​​, ಕೃಷಿ ಕಾನೂನುಗಳು, ಹಣದುಬ್ಬರ, ಬೆಲೆ ಏರಿಕೆ, ನಿರುದ್ಯೋಗಗಳ ಬಗ್ಗೆ ಚರ್ಚಿಸಲು ಮುಂದಾಗದ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.

ಮಾನ್ಸೂನ್ ಅಧಿವೇಶನದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆಯನ್ನು ತಡೆಯಲು ಮಾರ್ಷಲ್​ಗಳನ್ನು ನಿಯೋಜಿಸಿದ್ದರಿಂದ ಮಹಿಳೆಯರು ಸೇರಿದಂತೆ ಸಂಸದರು ಗಾಯಗೊಂಡಿದ್ದಾರೆಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಚರ್ಚೆಯಿಲ್ಲದೇ ಹಲವಾರು ಮಸೂದೆಗಳನ್ನು ಕಾಯ್ದೆಗಳನ್ನಾಗಿ ರೂಪಿಸಿದ್ದಕ್ಕೆ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದು, ಕಾಯ್ದೆಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿವೆ.

ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಮಾಡಿದ ಪ್ರಧಾನಿ ಮೋದಿ ಭಾಷಣದಲ್ಲಿ, ಜನರ ಸಂಕಷ್ಟಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಇರಲಿಲ್ಲ. ಭಾಷಣವು ವಾಕ್ಚಾತುರ್ಯ, ಖಾಲಿ ಘೋಷಣೆಗಳು ಮತ್ತು ತಪ್ಪು ಮಾಹಿತಿಯಿಂದ ತುಂಬಿತ್ತು ಎಂದು ಆರೋಪಿಸಿವೆ.

ವಿಪಕ್ಷಗಳು ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ ಕೇಂದ್ರ ಸರ್ಕಾರದ ಮುಂದೆ 11 ಬೇಡಿಕೆಗಳನ್ನಿಟ್ಟಿವೆ

1. ಭಾರತದಲ್ಲಿ ಲಸಿಕೆಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿ. ಜಾಗತಿಕವಾಗಿ ಲಸಿಕೆಗಳನ್ನು ಖರೀದಿಸಿ ಮತ್ತು ಉಚಿತ ಸಾರ್ವತ್ರಿಕ ವ್ಯಾಕ್ಸಿನೇಷನ್ ಡ್ರೈವ್ ಅನ್ನು ವೇಗಗೊಳಿಸಿ. ಕೋವಿಡ್‌ನಿಂದ ಜೀವ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಒದಗಿಸಿ. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ವಿಸ್ತರಿಸಿ

2. ಕೇಂದ್ರ ಸರ್ಕಾರವು ಆದಾಯ ತೆರಿಗೆ ವ್ಯಾಪ್ತಿಯ ಹೊರಗಿನ ಎಲ್ಲ ಕುಟುಂಬಗಳಿಗೆ ತಿಂಗಳಿಗೆ ರೂ .7,500 ಉಚಿತ ನಗದು ವರ್ಗಾವಣೆ ಜಾರಿಗೊಳಿಸಬೇಕು. ಅಗತ್ಯವಿರುವ ಎಲ್ಲರಿಗೆ ದೈನಂದಿನ ಬಳಕೆಯ ಅಗತ್ಯ ವಸ್ತುಗಳನ್ನು ಹೊಂದಿರುವ ಉಚಿತ ಆಹಾರ ಕಿಟ್‌ಗಳನ್ನು ವಿತರಿಸಿ.

3. ಕೇಂದ್ರೀಯ ಅಬಕಾರಿ ಸುಂಕಗಳಲ್ಲಿ ಪೆಟ್ರೋಲಿಯಂ ಮತ್ತು ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಿ. ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡಿ, ವಿಶೇಷವಾಗಿ ಅಡುಗೆ ಎಣ್ಣೆ ಮತ್ತು ಹಣದುಬ್ಬರವನ್ನು ನಿಯಂತ್ರಿಸಿ.

4. ಮೂರು ಕೃಷಿ ವಿರೋಧಿ ಕಾನೂನುಗಳನ್ನು ರದ್ದುಗೊಳಿಸಿ ಮತ್ತು ಎಂಎಸ್​ಪಿಯನ್ನು ಕಡ್ಡಾಯವಾಗಿ ಜಾರಿಗೊಳಿಸಿ.

5. ಸಾರ್ವಜನಿಕ ವಲಯದ ಅನಿಯಂತ್ರಿತ ಖಾಸಗೀಕರಣವನ್ನು ನಿಲ್ಲಿಸಿ. ಕಾರ್ಮಿಕ ವರ್ಗದ ಹಕ್ಕುಗಳನ್ನು ದುರ್ಬಲಗೊಳಿಸುವ ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಿ. ದುಡಿಯುವ ಜನರ ಹಕ್ಕುಗಳನ್ನು ಮರುಸ್ಥಾಪಿಸಿ.

6. ಎಂಎಸ್‌ಎಂಇಗಳ ಪುನರುಜ್ಜೀವನಕ್ಕಾಗಿ ವಿತ್ತೀಯ ಉತ್ತೇಜನ ಪ್ಯಾಕೇಜ್‌ಗಳನ್ನು ಜಾರಿಗೊಳಿಸಿ. ನಮ್ಮ ಆರ್ಥಿಕ ಮತ್ತು ಸಾಮಾಜಿಕ ಮೂಲಸೌಕರ್ಯಗಳನ್ನು ನಿರ್ಮಿಸಲು, ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ದೇಶೀಯ ಬೇಡಿಕೆಯನ್ನು ಹೆಚ್ಚಿಸಲು ಸಾರ್ವಜನಿಕ ಹೂಡಿಕೆ ಹೆಚ್ಚಿಸಿ. ಸರ್ಕಾರಿ ಉದ್ಯೋಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ.

7.ಎಂಜಿಎನ್‌ಆರ್‌ಇಜಿಎ (ನರೇಗಾ) ಅನ್ನು 200 ದಿನಗಳವರೆಗೆ ವಿಸ್ತರಿಸಿ. ಕನಿಷ್ಠ ವೇತನ ದ್ವಿಗುಣಗೊಳಿಸಿ. ಇದೇ ರೀತಿಯಲ್ಲಿ ನಗರ ಉದ್ಯೋಗ ಖಾತರಿ ಕಾರ್ಯಕ್ರಮವನ್ನು ಶಾಸನಗೊಳಿಸಿ.

8.ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ವ್ಯಾಕ್ಸಿನೇಷನ್​ಗೆ ಮೊದಲ ಆದ್ಯತೆ ನೀಡಿ ಶಿಕ್ಷಣ ಸಂಸ್ಥೆಗಳನ್ನು ಶೀಘ್ರ ತೆರೆಯಲು ಕ್ರಮ ಕೈಗೊಳ್ಳಿ.

9. ಜನರ ಮೇಲ್ವಿಚಾರಣೆಗಾಗಿ ಪೆಗಾಸಸ್ ಸ್ಪೈವೇರ್ ಬಳಕೆ ಕುರಿತು ತಕ್ಷಣವೇ ಸುಪ್ರೀಂಕೋರ್ಟ್-ಮೇಲ್ವಿಚಾರಣೆಯ ನ್ಯಾಯಾಂಗ ತನಿಖೆಯನ್ನು ನಡೆಸಬೇಕು. ರಫೇಲ್ ಒಪ್ಪಂದದ ಕುರಿತು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕೆಂದು ಪ್ರತಿಪಕ್ಷಗಳ ನಾಯಕರು ಬಲವಾಗಿ ಒತ್ತಾಯಿಸಿದ್ದಾರೆ.

10. ಭೀಮಾ ಕೋರೆಗಾಂವ್ ಪ್ರಕರಣ, ಯುಎಪಿಎ ಮತ್ತು ಸಿಎಎ ವಿರೋಧಿ ಪ್ರತಿಭಟನೆಗಳು ಸೇರಿದಂತೆ ಹೋರಾಟಗಳಲ್ಲಿ ಬಂಧಿಸಲಾಗಿರುವವರನ್ನು ಬಿಡುಗಡೆ ಮಾಡಿ. ಜನರ ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳನ್ನು ಉಲ್ಲಂಘಿಸಲು ದೇಶದ್ರೋಹ/ NSA ನಂತಹ ಇತರ ಕಠಿಣ ಕಾನೂನುಗಳನ್ನು ಬಳಸುವುದನ್ನು ನಿಲ್ಲಿಸಿ.

11. ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲ ಹಕ್ಕನ್ನು ಚಲಾಯಿಸಿದ್ದಕ್ಕಾಗಿ ಬಂಧಿಸಿರುವ ಎಲ್ಲ ಮಾಧ್ಯಮ ಸಿಬ್ಬಂದಿಯನ್ನು ಬಿಡುಗಡೆ ಮಾಡಿ. ಜಮ್ಮುಕಾಶ್ಮೀರದ ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು ಮತ್ತು ಸಂಪೂರ್ಣ ರಾಜ್ಯತ್ವವನ್ನು ಮರುಸ್ಥಾಪಿಸಬೇಕು. ಆದಷ್ಟು ಬೇಗ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನಡೆಸಬೇಕೆಂದು ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ಮುಂದೆ ತಮ್ಮ ಬೇಡಿಕೆ ಇಟ್ಟಿವೆ.

ಇದನ್ನೂ ಓದಿ: ಮೋದಿ ಸರ್ಕಾರಕ್ಕೆ ಠಕ್ಕರ್ ಕೊಡಲು ವಿಪಕ್ಷಗಳು ಸಜ್ಜು.. ಪ್ರತಿಪಕ್ಷಗಳಿಗೆ ಸೋನಿಯಾ ಕೊಟ್ಟ ಸಲಹೆಗಳೇನು?

ಸಹಿ ಹಾಕದ ಪಕ್ಷಗಳು ಸಹ ಜಂಟಿಯಾಗಿ ಸೆಪ್ಟೆಂಬರ್ 20 ರಿಂದ 30 ರವರೆಗೆ ದೇಶಾದ್ಯಂತ ಪ್ರತಿಭಟನೆಗಳನ್ನು ಆಯೋಜಿಸಲು ನಿರ್ಧರಿಸಿವೆ. ಕೋವಿಡ್ -19 ಅನ್ನು ಗಮನದಲ್ಲಿಟ್ಟುಕೊಂಡು ವಿರೋಧ ಪಕ್ಷಗಳ ರಾಜ್ಯ ಘಟಕಗಳು ಪ್ರತಿಭಟನಾ ಯೋಜನೆಗಳನ್ನು ನಿರ್ಧರಿಸುತ್ತವೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ABOUT THE AUTHOR

...view details