ನವದೆಹಲಿ:ದೇಶದ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಯ ಗುರಿಯನ್ನು ಹೊಂದಿರುವ ಯೋಜನೆಯ ಮಾದರಿಯಲ್ಲಿ ಮಹತ್ವಾಕಾಂಕ್ಷಿ ಬ್ಲಾಕ್ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಲು ಮೂಲಸೌಕರ್ಯ, ಹೂಡಿಕೆ, ನಾವೀನ್ಯತೆ ಮತ್ತು ಸೇರ್ಪಡೆ ಈ ನಾಲ್ಕು ಸ್ತಂಭಗಳ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸುತ್ತಿದೆ ಎಂದು ಹೇಳಿದರು.
ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಎರಡನೇ ರಾಷ್ಟ್ರೀಯ ಸಮ್ಮೇಳನದ ಮೂರನೇ ಮತ್ತು ಕೊನೆಯ ದಿನದಂದು ಅಧ್ಯಕ್ಷತೆ ವಹಿಸಿ ಮಾತನಾಡಿದ ಮೋದಿ, ಜಾಗತಿಕ ಪೂರೈಕೆ ಸರಪಳಿಯಲ್ಲಿ ಸ್ಥಿರತೆ ಮೂಡಿಸಲು ಇಡೀ ಜಗತ್ತು ಭಾರತದತ್ತ ನೋಡುತ್ತಿದೆ. ಈ ನಿಟ್ಟಿನಲ್ಲಿ ದೇಶದ ಎಂಎಸ್‌ಎಂಇ ವಲಯವು ಜಾಗತಿಕ ಚಾಂಪಿಯನ್ ಆಗುವಂತೆ ಮತ್ತು ಈ ವಲಯ ಜಾಗತಿಕ ಮೌಲ್ಯ ಸರಪಳಿಯ ಒಂದು ಭಾಗವಾಗುವಂತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಕೇಳಿಕೊಂಡರು. ರಾಜ್ಯಗಳು ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ಮತ್ತು ಭಾರತವೇ ಪ್ರಥಮ ಎಂಬ ವಿಧಾನದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಮುನ್ನಡೆ ಸಾಧಿಸಿದರೆ ಮಾತ್ರ ದೇಶವು ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದು. ತರ್ಕವಿಲ್ಲದ ಅನುಸರಣೆ ಹಾಗೂ ಹಳತಾದ ಕಾನೂನು ಮತ್ತು ನಿಯಮಗಳನ್ನು ಕೊನೆಗೊಳಿಸುವತ್ತ ಗಮನಹರಿಸುವಂತೆ ಪ್ರಧಾನ ಮಂತ್ರಿಗಳು ಮುಖ್ಯ ಕಾರ್ಯದರ್ಶಿಗಳಿಗೆ ಕರೆ ನೀಡಿದರು.
ಭಾರತವು ಯಾರಿಗೂ ಸಾಟಿಯಿಲ್ಲದಂಥ ಸುಧಾರಣೆಗಳನ್ನು ಪ್ರಾರಂಭಿಸುತ್ತಿರುವ ಈ ಸಮಯದಲ್ಲಿ, ಮಿತಿಮೀರಿದ ನಿಯಂತ್ರಣ ಮತ್ತು ತರ್ಕಹೀನ ನಿರ್ಬಂಧಗಳಿಗೆ ಯಾವುದೇ ಅವಕಾಶವಿಲ್ಲ. ರಾಜ್ಯಗಳು ಅಭಿವೃದ್ಧಿ ಪರ ಆಡಳಿತ, ಸುಲಭ ವ್ಯವಹಾರ, ಬದುಕಲು ಸುಲಭ ಮತ್ತು ದೃಢವಾದ ಮೂಲಸೌಕರ್ಯಗಳನ್ನು ಒದಗಿಸುವತ್ತ ಗಮನಹರಿಸಬೇಕು ಎಂದು ಮೋದಿ ಟ್ವೀಟ್ನಲ್ಲಿ ಹೇಳಿದ್ದಾರೆ. ನಾವು ಸ್ವಯಂ ಪ್ರಮಾಣೀಕರಣ, ಸ್ವಯಂ ಅನುಮೋದನೆಗಳು ಮತ್ತು ನಿಯಮಗಳ ಪ್ರಮಾಣೀಕರಣದತ್ತ ಸಾಗಬೇಕು. ಇಡೀ ವಿಶ್ವದ ದೃಷ್ಟಿ ಭಾರತದ ಮೇಲೆ ನೆಟ್ಟಿರುವುದರಿಂದ ನಮ್ಮ ಯುವಜನರ ಅಪ್ರತಿಮ ಪ್ರತಿಭೆಯ ಬಲದಿಂದ ಮುಂಬರುವ ವರ್ಷಗಳು ಭಾರತದ ವರ್ಷಗಳಾಗಲಿವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.