ನವದೆಹಲಿ:ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾಗುವ ಒಂದು ದಿನದ ಮುನ್ನ ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಕೊಟ್ಟ ಕೊನೆಯ ಸಂದೇಶ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
1971ರ ಭಾರತ-ಪಾಕ್ ಯುದ್ಧದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಜಯಗಳಿಸಿ 50 ವರ್ಷಗಳನ್ನು ಪೂರೈಸಿರುವ ಹಾಗೂ ಭಾರತ-ಬಾಂಗ್ಲಾದೇಶದ ಸ್ನೇಹದ ಭಾರತ-ಬಾಂಗ್ಲಾದೇಶದ ಸ್ನೇಹದ ಸ್ಮರಣಾರ್ಥವಾಗಿ ಇಂದು ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂಡಿಯಾ ಗೇಟ್‌ನಲ್ಲಿ 'ಸ್ವರ್ಣಿಮ್ ವಿಜಯ್ ಪರ್ವ್' ಅನ್ನು ಉದ್ಘಾಟಿಸಿದರು.
ಇದನ್ನೂ ಓದಿ: ಗಂಗೆಯಲ್ಲಿ ಬಿಪಿನ್ ರಾವತ್-ಮಧುಲಿಕಾ ಅಸ್ಥಿ ವಿಸರ್ಜಿಸಿದ ಪುತ್ರಿಯರು
'ಸ್ವರ್ಣಿಮ್ ವಿಜಯ್ ಪರ್ವ್'ಗಾಗಿ ಬಿಪಿನ್ ರಾವತ್ ಅವರ ಮಾತುಗಳನ್ನು ಡಿಸೆಂಬರ್ 7ರಂದು ರೆಕಾರ್ಡ್ ಮಾಡಿಡಲಾಗಿತ್ತು. ಇಂದು ಕಾರ್ಯಕ್ರಮದ ಉದ್ಘಾಟನೆ ವೇಳೆ ಅವರ ಕೊನೆಯ ವಿಡಿಯೋ ಸಂದೇಶವನ್ನು ಪ್ರಸಾರ ಮಾಡಲಾಯಿತು. ಈ ವಿಡಿಯೋದಲ್ಲಿ ಬಿಪಿನ್ ರಾವತ್ ಅವರು ಸಶಸ್ತ್ರ ಪಡೆಗಳಿಗೆ ಅಭಿನಂದಿಸಿ, 1971ರ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮಿಸಿದ್ದಾರೆ.
ಕೂನೂರು ಹೆಲಿಕಾಪ್ಟರ್ ಅಪಘಾತ
ಡಿಸೆಂಬರ್ 8 ರಂದು ತಮಿಳುನಾಡಿನ ಕೂನೂರಿನಲ್ಲಿ ಹೆಲಿಕಾಪ್ಟರ್ ಪತನಗೊಂಡು ಬಿಪಿನ್ ರಾವತ್, ಮಧುಲಿಕಾ ಹಾಗೂ ಇತರ 11 ಮಂದಿ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು. ದೆಹಲಿಯಲ್ಲಿ ಶನಿವಾರ ಬಿಪಿನ್ ರಾವತ್ ಮತ್ತು ಮಧುಲಿಕಾ ಅವರ ಅಂತ್ಯಕ್ರಿಯೆಯನ್ನು ಸಕಲ ಸೇನಾ ಗೌರವಗಳೊಂದಿಗೆ ನೆರವೇರಿಸಲಾಗಿತ್ತು.