ಭೋಪಾಲ್, ಮಧ್ಯಪ್ರದೇಶ :ತಮಿಳುನಾಡಿನ ಕೂನೂರಿನಲ್ಲಿ ನಡೆದ ವಾಯುಪಡೆಯ ಹೆಲಿಕಾಪ್ಟರ್ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹಾಗೂ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಹುತಾತ್ಮರಾದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ಸೇನಾ ಗೌರವಗಳೊಂದಿಗೆ ಮಧ್ಯಪ್ರದೇಶದ ಬೈರಗಢದ ವಿಶ್ರಾಮ್ ಘಾಟ್ನಲ್ಲಿ ನೆರವೇರಿಸಲಾಗಿದೆ.
ಅಂತ್ಯಕ್ರಿಯೆಯ ವೇಳೆ ವರುಣ್ ಸಿಂಗ್ ಪಾರ್ಥಿವ ಶರೀರದ ದರ್ಶನ ಪಡೆದು ಮಾತನಾಡಿದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸಂಸ್ಥೆಯೊಂದಕ್ಕೆ ಅವರ ಹೆಸರಿಡುವುದು ಮತ್ತು ಅವರ ಸ್ಮರಣಾರ್ಥ ಪ್ರತಿಮೆಯೊಂದನ್ನು ಸ್ಥಾಪನೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ವರುಣ್ ಸಿಂಗ್ ಕುಟುಂಬದೊಂದಿಗೆ ಚರ್ಚೆ ನಡೆಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದರೊಂದಿಗೆ ವರುಣ್ ಸಿಂಗ್ ಅವರ ಕುಟುಂಬಸ್ಥರಿಗೆ 1 ಕೋಟಿ ರೂಪಾಯಿ ಪರಿಹಾರವನ್ನು ರಾಜ್ಯ ಸರ್ಕಾರ ನೀಡುತ್ತದೆ. ವರುಣ್ ಸಿಂಗ್ ಅವರು ಭಾರತ ಮಾತೆಯ ನಿಜವಾದ ಪುತ್ರ ಮತ್ತು ಅವರ ಬಗ್ಗೆ ದೇಶವು ಹೆಮ್ಮೆಪಡುತ್ತದೆ ಎಂದು ಅಭಿಪ್ರಾಯಪಟ್ಟರು. ವರುಣ್ ಸಿಂಗ್ ಕುಟುಂಬದ ಸದಸ್ಯರಲ್ಲಿ ಒಬ್ಬರನ್ನು ಸರ್ಕಾರಿ ಸೇವೆಗಳಲ್ಲಿ ನೇಮಿಸಿಕೊಳ್ಳುವ ಪ್ರಸ್ತಾಪವೂ ಇದೆ ಎಂದು ಮಧ್ಯಪ್ರದೇಶ ಸಿಎಂ ಹೇಳಿದರು.