ಕೊರೊನಾ ದಾಳಿಗೆ ಸಿಲುಕಿ ನಲುಗಿರುವ ವಿಶ್ವಕ್ಕೆ ಇದೀಗ ಲಸ್ಸಾ ಜ್ವರದ ಭೀತಿ ಶುರುವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ನೈಜೀರಿಯಾದಲ್ಲಿ ಈ ವರ್ಷದ ಜನವರಿ ತಿಂಗಳಲ್ಲಿ ಲಸ್ಸಾ ಜ್ವರಕ್ಕೆ ಸುಮಾರು 40 ಜನರು ಸಾವಿಗೀಡಾಗಿದ್ದಾರೆ. ಇದರಲ್ಲಿ 30 ನೈಜೀರಿಯಾದಲ್ಲಿಯೇ ದಾಖಲಾದರೆ, 14 ಕೇಸ್ಗಳು ದೇಶಾದ್ಯಂತ ವರದಿಯಾಗಿವೆ. ಹೊಸ ಭೀತಿ ಸೃಷ್ಟಿಸಿರುವ ಲಸ್ಸಾ ಜ್ವರ ನಿಜಕ್ಕೂ ಗಂಭೀರವೇ? ಅದರ ಗುಣಲಕ್ಷಣಗಳೇನು, ಚಿಕಿತ್ಸೆಯ ಬಗ್ಗೆ ಮಾಹಿತಿ ಇಲ್ಲಿದೆ.
ಲಸ್ಸಾ ಜ್ವರ ಎಂದರೇನು?:WHO ಪ್ರಕಾರ ಲಸ್ಸಾ ಜ್ವರವು ವೈರಲ್ ಹೆಮರಾಜಿಕ್ ಜ್ವರವಾಗಿದೆ. ಇದು ಪ್ರಾಥಮಿಕವಾಗಿ ಇಲಿಗಳ ಮೂತ್ರ ಅಥವಾ ಮಲದಿಂದ ಕಲುಷಿತಗೊಂಡ ಮನೆಯ ವಸ್ತುಗಳ ಸಂಪರ್ಕ, ಆಹಾರ ಸೇವನೆಯ ಮೂಲಕ ಮನುಷ್ಯರಿಗೆ ಹರಡುತ್ತದೆ.
ಇದಲ್ಲದೇ, ಸೋಂಕಿತ ವ್ಯಕ್ತಿಯ ನೇರ ಸಂಪರ್ಕ ಅಂದರೆ, ರಕ್ತ, ಬೆವರಿನ ಮೂಲಕ ಹರಡುವ ಸಾಧ್ಯತೆ ಇದೆ. ಜ್ವರದ ಬಾಧೆ ಉಂಟಾದ ತಕ್ಷಣವೇ ಚಿಕಿತ್ಸೆ ಪಡೆದಲ್ಲಿ ವ್ಯಕ್ತಿಯನ್ನು ಬದುಕುಳಿಸಬಹುದು ಎಂಬುದು ವೈದ್ಯರ ಸಲಹೆಯಾಗಿದೆ.
ಲಸ್ಸಾ ಜ್ವರ ಮನುಷ್ಯನಲ್ಲಿ 1 ರಿಂದ 3 ವಾರಗಳ ಅಂತರದಲ್ಲಿ ಗೋಚರಿಸಲು ಶುರು ಮಾಡುತ್ತದೆ. ಲಸ್ಸಾ ಜ್ವರದ ವೈರಸ್ನಿಂದ ಸೋಂಕು (80 ಪ್ರತಿಶತ) ಹರಡಲಿದೆ. ಪ್ರಾರಂಭದಲ್ಲಿ ರೋಗಲಕ್ಷಣಗಳು ಸೌಮ್ಯವಾಗಿರುತ್ತವೆ. ತಕ್ಷಣಕ್ಕೇ ರೋಗವನ್ನು ಪತ್ತೆ ಮಾಡಲು ಕಷ್ಟಸಾಧ್ಯ. ಅಲ್ಲದೇ ಸೋಂಕಿತ ವ್ಯಕ್ತಿಗಳಲ್ಲಿ ಒಸಡು, ಕಣ್ಣು, ಮೂಗಿನಲ್ಲಿ ರಕ್ತಸ್ರಾವ ಉಂಟಾಗುತ್ತದೆ.
ಇದಲ್ಲದೇ, ಉಸಿರಾಟದ ತೊಂದರೆ, ವಾಂತಿ, ಮುಖದ ಊತ, ಎದೆ, ಬೆನ್ನು ಮತ್ತು ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡು ಬಳಿಕ ಸೋಂಕಿನ ತೀವ್ರತೆ ಹೆಚ್ಚಿ, ಶ್ರವಣ ನಷ್ಟ, ನಡುಕ ಮತ್ತು ಎನ್ಸೆಫಾಲಿಟಿಸ್ ಸೇರಿದಂತೆ ನರಗಳ ಮೇಲೂ ಪರಿಣಾಮ ಬೀರಲಿದೆ. ಬಳಿಕ ಇದು ಅಂಗಾಂಗ ವೈಫಲ್ಯಕ್ಕೂ ಕಾರಣವಾಗಲಿದೆ. ಬಳಿಕ ಇದು ಸೋಂಕಿತನನ್ನು ಸಾವಿನ ದವಡೆಗೂ ತಳ್ಳಲಿದೆ.