ಆಗ್ರಾ(ಉತ್ತರ ಪ್ರದೇಶ): ಭಾರತದ ಅತಿಥ್ಯದಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯ ಪ್ರತಿನಿಧಿಗಳಿಗಾಗಿ ವಿಶೇಷ ಲೇಸರ್ ಸೌಂಡ್ ಅಂಡ್ ಲೈಟ್ ಶೋವನ್ನು ಹಮ್ಮಿಕೊಳ್ಳಲಾಗಿತ್ತು. ಐತಿಹಾಸಿಕ ಆಗ್ರಾ ಕೋಟೆ ದಿವಾನ್-ಇ-ಆಮ್ನಲ್ಲಿ ಈ ವಿಶೇಷ ಕಾರ್ಯವನ್ನು ನಡೆಸಲಾಯಿತು. ಇನ್ನು, ಈ ಕಾರ್ಯಕ್ರಮ ನಡೆಸಿದ ಹಿನ್ನೆಲೆ ಪ್ರಾಜೆಕ್ಷನ್ ಮ್ಯಾಪಿಂಗ್ ಮತ್ತು ಸಂಗೀತ ಕಾರ್ಯಕ್ರಮದಿಂದಾಗಿ ದಿವಾನ್- ಇ- ಆಮ್ ಕೋಟೆಯ ಮೇಲ್ಛಾವಣಿ ಹಾನಿಗೊಂಡಿರುವುದು ಪ್ರಾಥಮಿಕ ಫಲಿತಾಂಶದಲ್ಲಿ ತಿಳಿದು ಬಂದಿದೆ.
ಯುನೆಸ್ಕೋ ಮಾರ್ಗದರ್ಶನದ ಅನುಸಾರ, ಪಾರಂಪರಿಕ ಸ್ಥಳಗಳಲ್ಲಿ ಧ್ವನಿ ಮಿತಿ 40 ಡೆಸಿಬಲ್ ಇರಬೇಕು. ಈ ಮಾರ್ಗದರ್ಶನವನ್ನು ಮೀರಿ ಕಾರ್ಯಕ್ರಮಗದಲ್ಲಿ ಅನುಮತಿ ನೀಡಿದ್ದಕ್ಕಿಂತ ಹೆಚ್ಚಿನ ಡೆಸಿಬಲ್ಸ್(ಶಬ್ದದ) ಮಟ್ಟ ಹೆಚ್ಚಾಗಿರುವುದು ಕೋಟೆಯ ಮೇಲ್ಛಾವಣಿಯಲ್ಲಿ ಬಿರುಕು ಬಿಡಲು ಕಾರಣವಾಗಿದೆ ಎಂದು ಅಭಿಪ್ರಾಯ ಪಡಲಾಗಿದೆ.
ಮೂಲಗಳ ಪ್ರಕಾರ, ಕೋಟೆಯ ಮೇಲ್ಛಾವಣಿಯಲ್ಲಿ 2 ರಿಂದ 6ಎಂಎಂ ಹಾನಿ ಕಂಡು ಬಂದಿದೆ. ಬಿರುಕು ಕಂಡು ಬಂದ ಜಾಗದಲ್ಲಿ ಪ್ಲಾಸ್ಟರ್ಗಳ ತೇಪೆಯನ್ನು ಹಾಕಲಾಗಿದೆ. ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು, ಈ ಬಿರುಕು ಕಂಡು ಬರುತ್ತಿದ್ದಂತೆ ಎಚ್ಚೆತ್ತಿದ್ದು, ಕೋಟೆ ಸುತ್ತ ಹಾನಿಗೊಂಡ ಪ್ರದೇಶಗಳನ್ನು ಬಂದ್ ಮಾಡಲಾಗಿದೆ. ಈ ಪ್ರದೇಶದ ಸುತ್ತ ಪ್ರವಾಸಿಗರು ಹೋಗದಂತೆ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ ಎಂದು ತಿಳಿದುಬಂದಿದೆ.
ಭಾರತೀಯ ಪುರಾತತ್ವ ಇಲಾಖೆ ಆರ್ಕಲಾಜಿಸ್ಟ್ ರಾಜ್ ಕುಮಾರ್ ಪಟೇಲ್ ಈ ಕುರಿತು ಮಾತನಾಡಿ, ಕೋಟೆಯ ಪರಿಶೀಲನೆ ವೇಳೆ ಹಾನಿಗೊಂಡಿರುವ ಬಗ್ಗೆ ತಿಳಿದು ಬಂದಿದೆ. ಜಿ 20 ಪ್ರತಿನಿಧಿಗಳಿಗಾಗಿ ಫೆ. 11ರಂದು ದಿವನ್-ಇ-ಆಮ್ ಕೋಟೆಯ ಆವರಣದಲ್ಲಿ ಲೇಸರ್ ಸೌಂಡ್ ಮತ್ತು ಲೈಟ್ ಶೋವನ್ನು ಆಯೋಜಿಸಲಾಗಿತ್ತು. ಇದೀಗ ಈ ಹಾನಿಯೂ ಕಾರ್ಯಕ್ರಮದ ಬಳಿಕ ಕಂಡು ಬಂದಿದ್ಯಾ, ಅಥವಾ ಕಾರ್ಯಕ್ರಮಕ್ಕೆ ಮುಂಚೆಯೇ ಮೇಲ್ಛಾವಣಿಗಳಲ್ಲಿ ಬಿರುಕು ಇತ್ತಾ ಎಂಬುದರ ಪತ್ತೆಗೆ ಕಾರ್ಯ ನಡೆಸಲಾಗಿದೆ ಎಂದರು.