ನವದೆಹಲಿ:''ಸಿಗ್ನಲಿಂಗ್ ಸರ್ಕ್ಯೂಟ್ ಬದಲಾವಣೆಯಲ್ಲಿನ ಲೋಪದಿಂದ ಜೂನ್ 2 ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ದುರಂತ ಟ್ರಿಪಲ್ ರೈಲು ಅಪಘಾತಕ್ಕೆ ಕಾರಣವಾಯಿತು'' ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ಹೇಳಿದ್ದಾರೆ.
''295 ಜನರನ್ನು ಬಲಿತೆಗೆದುಕೊಂಡ ಬಾಲಸೋರ್ ರೈಲು ಅಪಘಾತದ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯದ ಅಡಿ ರೈಲ್ವೆ ಸುರಕ್ಷತಾ ಆಯುಕ್ತರು ವಿಚಾರಣೆ ಪೂರ್ಣಗೊಳಿಸಿದ್ದಾರೆ'' ಎಂದು ಕೇಂದ್ರ ಸಚಿವರು ಹೇಳಿದರು.
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ:"ಈ ಹಿಂದೆ ನಾರ್ತ್ ಸಿಗ್ನಲ್ ಗೂಮ್ಟಿಯಲ್ಲಿ (ನಿಲ್ದಾಣದ) ಸಿಗ್ನಲಿಂಗ್ ಸರ್ಕ್ಯೂಟ್ ಮಾರ್ಪಡಿಸುವಿಕೆಯಲ್ಲಿನ ಆದ ಲೋಪಗಳು ಮತ್ತು ನಿಲ್ದಾಣದ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 94ಗಾಗಿ ಎಲೆಕ್ಟ್ರಿಕ್ ಲಿಫ್ಟಿಂಗ್ ಬ್ಯಾರಿಯರ್ ಅನ್ನು ಬದಲಾಯಿಸುವ ಸಂಬಂಧ ಸಿಗ್ನಲಿಂಗ್ ಕಾರ್ಯವನ್ನು ನಿರ್ವಹಿಸುವಾಗ, ಹಿಂಬದಿ ಡಿಕ್ಕಿ ಸಂಭವಿಸಿದೆ. ಈ ಲೋಪಗಳು ರೈಲು ಸಂಖ್ಯೆ 12841ಗೆ ತಪ್ಪು ಸಿಗ್ನಲಿಂಗ್‌ಗೆ ಕಾರಣವಾಯಿತು. ಇದರಲ್ಲಿ ಯುಪಿ ಹೋಮ್ ಸಿಗ್ನಲ್ ನಿಲ್ದಾಣದ ಯುಪಿ ಮುಖ್ಯ ಮಾರ್ಗದಲ್ಲಿ ರನ್-ಥ್ರೂ ಚಾಲನೆಗೆ ಹಸಿರು ಅಂಶವನ್ನು ಸೂಚಿಸುತ್ತದೆ.
ಆದರೆ, ಯುಪಿ ಮುಖ್ಯ ಮಾರ್ಗವನ್ನು ಯುಪಿ ಲೂಪ್ ಲೈನ್‌ಗೆ (ಕ್ರಾಸ್‌ಓವರ್ 17A/B) ಸಂಪರ್ಕಿಸುವ ಕ್ರಾಸ್ ಒವರ್ ಅನ್ನು ಯುಪಿ ಲೂಪ್ ಲೈನ್‌ಗೆ ಹೊಂದಿಸಲಾಗಿದೆ. ತಪ್ಪು ಸಿಗ್ನಲಿಂಗ್‌ನಿಂದ ರೈಲು ನಂ.12841 ಯುಪಿ ಲೂಪ್ ಲೈನ್‌ನಲ್ಲಿ ಸಂಚರಿಸಿತು. ಅಂತಿಮವಾಗಿ ಅಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ (ಸಂಖ್ಯೆ ಎನ್/ಡಿಡಿಐಪಿ) ಹಿಂಬದಿಯಿಂದ ಡಿಕ್ಕಿಯಾಯಿತು'' ಎಂದು ಅಶ್ವಿನಿ ವೈಷ್ಣವ್ ರಾಜ್ಯಸಭೆಗೆ ತಿಳಿಸಿದರು.
ದುರಂತದ ಕುರಿತು ರಾಜ್ಯಸಭೆಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನಾಯಕ ಜಾನ್ ಬ್ರಿಟಾಸ್ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸಂಜಯ್ ಸಿಂಗ್ ಅವರು ಕೇಳಿದ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು. ಜೂನ್ 2 ರಂದು ಚೆನ್ನೈಗೆ ಹೋಗುವ ಕೋರಮಂಡಲ್ ಎಕ್ಸ್‌ಪ್ರೆಸ್, ಹೌರಾಕ್ಕೆ ಹೋಗುವ ಶಾಲಿಮಾರ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲನ್ನು ಒಳಗೊಂಡ ಟ್ರಿಪಲ್ ರೈಲು ಅಪಘಾತದ ದುರಂತ ಘಟನೆ. 295 ಪ್ರಯಾಣಿಕರು ಪ್ರಾಣ ಕಳೆದುಕೊಂಡರೆ, 176 ಮಂದಿಗೆ ಗಂಭೀರ ಗಾಯಗಳಾಗಿವೆ. 451 ಮಂದಿಗೆ ಚಿಕ್ಕ ಗಾಯಗಳಾಗಿವೆ. 180 ಮಂದಿ ಪ್ರಥಮ ಚಿಕಿತ್ಸೆ ಪಡೆದು ತೆರಳಿದ್ದಾರೆ ಎಂದು ಅವರು ಹೇಳಿದರು.
41 ಮೃತ ವ್ಯಕ್ತಿಗಳ ಗುರುತು ಇನ್ನೂ ಪತ್ತೆಯಾಗಿಲ್ಲ: ಈ ಅಪಘಾತದಲ್ಲಿ 41 ಮೃತ ವ್ಯಕ್ತಿಗಳನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ಕೇಂದ್ರ ಸಚಿವ ವೈಷ್ಣವ್ ಮೇಲ್ಮನೆಗೆ ತಿಳಿಸಿದರು. ನಾಗರಿಕ ವಿಮಾನಯಾನ ಸಚಿವಾಲಯದ ಅಡಿ ಇಲಾಖಾ ವಿಚಾರಣೆ ಸಮಿತಿ ಮತ್ತು ರೈಲ್ವೆ ಸುರಕ್ಷತಾ ಆಯುಕ್ತರು, ವಿವಿಧ ಅಪಘಾತಗಳ ಕಾರಣಗಳನ್ನು ತನಿಖೆ ಮಾಡುವ ಪ್ರಮುಖ ಸಂಸ್ಥೆಗಳಾಗಿವೆ ಎಂದು ಅವರು ಹೇಳಿದರು.
"ಕಳೆದ 5 ವರ್ಷಗಳಲ್ಲಿ (2018-2023), 201 ಅಪಘಾತ ಪ್ರಕರಣಗಳನ್ನು ಇಲಾಖಾ ವಿಚಾರಣಾ ಸಮಿತಿಯಿಂದ ತನಿಖೆ ಮಾಡಲಾಗಿದೆ. 18 ಪ್ರಕರಣಗಳನ್ನು ರೈಲ್ವೆ ಸುರಕ್ಷತಾ ಆಯೋಗದಿಂದ ತನಿಖೆ ನಡೆಸಲಾಗಿದೆ. ಅಪಘಾತದ ಮೂಲವನ್ನು ಕಂಡುಹಿಡಿಯುವುದು ಮತ್ತು ಅಪಘಾತ ಮರುಕಳಿಸುವುದನ್ನು ತಡೆಯಲು ಅಗತ್ಯವಿರುವ ಕ್ರಮಗಳ ಕುರಿತು ತನಿಖೆ ಮಾಡಲಾಗುತ್ತದೆ. ವಿವಿಧ ಅಪಘಾತ ತನಿಖಾ ಸಮಿತಿಗಳು ತಮ್ಮ ವರದಿಯಲ್ಲಿ ಸೂಚಿಸಿದ ಶಿಫಾರಸುಗಳ ಪ್ರಕಾರ, ರೈಲ್ವೆ ಆಡಳಿತದಿಂದ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗಿದೆ" ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದರು.
ಇದನ್ನೂ ಓದಿ:ಕೊಳದಲ್ಲಿ ಮುಳುಗಿ ನಾಲ್ವರು ಶಾಲಾ ಬಾಲಕಿಯರು ಸಾವು!