ನವದೆಹಲಿ: ಖುದ್ದು ಹಾಜರಾಗಿ ತನ್ನ ಪ್ರಕರಣವನ್ನು ತಾನೇ ಹಿಂದಿಯಲ್ಲಿ ವಾದಿಸಲು ಪ್ರಾರಂಭಿಸಿದ ಅರ್ಜಿದಾರನಿಗೆ, ಈ ನ್ಯಾಯಾಲಯದ ಭಾಷೆ ಇಂಗ್ಲಿಷ್ ಎಂದು ಸುಪ್ರೀಂ ಕೋರ್ಟ್ ತಿಳಿ ಹೇಳಿದ ಪ್ರಸಂಗ ಇಂದು ನಡೆಯಿತು. ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರಿದ್ದ ಪೀಠವು, ಅರ್ಜಿದಾರ ಶಂಕರ್ ಲಾಲ್ ಶರ್ಮಾ ಪರ ವಾದಿಸಲು ವಕೀಲರನ್ನು ನೇಮಿಸಿತು.
ಇದನ್ನೂ ಮುನ್ನ ಶರ್ಮಾ ಹಿಂದಿಯಲ್ಲಿ ವಾದಿಸಲು ಪ್ರಾರಂಭಿಸಿ, ನನ್ನ ಪ್ರಕರಣದ ಬಗ್ಗೆ ಸರ್ವೋಚ್ಛ ನ್ಯಾಯಾಲಯವೂ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆದಿದೆ. ಆದರೆ ಎಲ್ಲಿಯೂ ಪರಿಹಾರ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ನ್ಯಾ.ಜೋಸೆಫ್ ಅವರು, "ನಾವು ನಿಮ್ಮ ಪ್ರಕರಣದ ಕಡತವನ್ನು ಓದಿದ್ದೇವೆ. ಇದು ತುಂಬಾ ಗೊಂದಲಮಯವಾಗಿದೆ. ನೀವು ಏನು ಹೇಳುತ್ತಿದ್ದೀರಿ ಎಂಬುದನ್ನು ಅರ್ಥ ಮಾಡಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ" ಎಂದು ತಿಳಿಸಿದರು.