ಕಿಶ್ತ್ವಾರ್(ಜಮ್ಮು ಮತ್ತು ಕಾಶ್ಮೀರ):ನಿರ್ಮಾಣ ಹಂತದಲ್ಲಿರುವ ರಾಟೆಲ್ ವಿದ್ಯುತ್ ಯೋಜನೆಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದಾಗ ಭೂಕುಸಿತ ಸಂಭವಿಸಿ, ಓರ್ವ ಪೊಲೀಸ್ ಸಿಬ್ಬಂದಿಯೂ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಆರು ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳಡಿ ಸಿಲುಕಿಕೊಂಡವರನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಟೆಲ್ ಪವರ್ ಪ್ರಾಜೆಕ್ಟ್ ಸೈಟ್ ಬಳಿ ಕಾರ್ಮಿಕರು ಕೆಲಸದಲ್ಲಿ ಜೆಸಿಬಿ ಅಗೆಯುತ್ತಿದ್ದಾಗ ದೊಡ್ಡ ಬಂಡೆಯೊಂದು ಉರುಳಿ ಕಾರ್ಮಿಕರ ಮೇಲೆ ಬಿದ್ದಿದೆ. ಬಂಡೆಯಡಿ ಬಿದ್ದವರನ್ನು ರಕ್ಷಿಸಲು ಹೋದ ಸಮಯದಲ್ಲಿ ಮತ್ತೆ ಮಣ್ಣು ಕುಸಿಯಿತು ಎಂದು ಕಿಶ್ತ್ವಾರ್ ಡಿಸಿ ದೇವಾಂಶ್ ಯಾದವ್ ತಿಳಿಸಿದರು.
ಪೊಲೀಸ್ ಸಿಬ್ಬಂದಿ, ಜೆಸಿಬಿ ಆಪರೇಟರ್ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಗಾಯಗೊಂಡ ಆರು ಮಂದಿಯಲ್ಲಿ ಮೂವರನ್ನು ದೋಡಾದ ಸರ್ಕಾರಿ ವೈದ್ಯಕೀಯ ಕಾಲೇಜು, ಇಬ್ಬರನ್ನು ಥಾತ್ರಿ ಆಸ್ಪತ್ರೆಗೆ ಮತ್ತು ಒಬ್ಬರನ್ನು ಜಮ್ಮುವಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಕೇಂದ್ರ ಸಚಿವ ಮತ್ತು ಜಮ್ಮು ಮತ್ತು ಕಾಶ್ಮೀರದ ಉಧಾಂಪುರದ ಸಂಸದ ಇತೇಂದ್ರ ಸಿಂಗ್, ಭೂಕುಸಿತದ ವರದಿಯನ್ನು ಜಿಲ್ಲಾಧಿಕಾರಿಯಿಂದ ಪಡೆದಿದ್ದಾರೆ. ಅಗತ್ಯವಿರುವ ನೆರವು ಒದಗಿಸಲಾಗುವುದು. ನಾನು ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ :ನಿರ್ಮಾಣ ಹಂತದ ವಿದ್ಯುತ್ ಕೇಂದ್ರದಲ್ಲಿ ಭಾರಿ ಭೂಕುಸಿತ: ಓರ್ವ ಸಾವು, ಹಲವರು ಸಿಲುಕಿರುವ ಶಂಕೆ