ಸುಂದರನಗರ / ಮಂಡಿ, ಹಿಮಾಚಲ ಪ್ರದೇಶ: ನಗರದಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ. ಭಾರಿ ಮಳೆಯಿಂದಾಗಿ ಮಂಡಿಯಲ್ಲಿ ಭೂಕುಸಿತ ಸಂಭವಿಸಿದೆ. ಗೋಹರ್ ಉಪವಿಭಾಗದ ಕಶನ್ ಗ್ರಾಮ ಪಂಚಾಯಿತಿಯ ಜಾಡೋನ್ ಗ್ರಾಮದಲ್ಲಿ ದೊಡ್ಡ ದುರಂತ ನಡೆದಿರುವುದು ಮುನ್ನೆಲೆಗೆ ಬಂದಿದೆ. ಇಲ್ಲಿ ಪಂಚಾಯತ್ ಅಧ್ಯಕ್ಷ ಖೇಮ್ ಸಿಂಗ್ ಅವರ ಮನೆಯಲ್ಲಿ ಭೂಕುಸಿತದಿಂದ ಮನೆ ಸೇರಿದಂತೆ ಕುಟುಂಬದ 7 ಜನರು ಅವಶೇಷಗಳಡಿ ಸಮಾಧಿಯಾಗಿದ್ದಾರೆ.
ನಿದ್ರೆಯಲ್ಲಿದ್ದ ಪಂಚಾಯ್ತಿ ಅಧ್ಯಕ್ಷನ ಕುಟುಂಬಸ್ಥರು: ಮಾಹಿತಿ ಪ್ರಕಾರ, ಕಶನ್ ಪಂಚಾಯತ್ ಅಧ್ಯಕ್ಷ ಖೇಮ್ ಸಿಂಗ್ ಅವರ 2 ಅಂತಸ್ತಿನ ಮನೆಯಲ್ಲಿ ಕುಟುಂಬದ ಸದಸ್ಯರೆಲ್ಲರೂ ನಿದ್ರೆಯಲ್ಲಿದ್ದರು. ಈ ವೇಳೆ ತಡರಾತ್ರಿ ಗುಡ್ಡ ಕುಸಿದು ಇವರ ಮನೆಯಲ್ಲಿ ಮಣ್ಣು ಆವರಿಸಿದೆ. ಪರಿಣಾಮ ಒಂದೇ ಕುಟುಂಬದ 7 ಮಂದಿ ಮೃತಪಟ್ಟಿದ್ದಾರೆ.
ಪಂಚಾಯ್ತಿ ಅಧ್ಯಕ್ಷನ ಕುಟುಂಬಸ್ಥರ ರಕ್ಷಣೆಗೆ ಹರಸಾಹಸ: ಈ ಸುದ್ದಿ ನಗರದಲ್ಲಿ ಬೆಂಕಿಯಂತೆ ಗ್ರಾಮದಲ್ಲಿ ಹಬ್ಬಿದೆ. ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಆಗಮಿಸಿ ಕುಟುಂಬ ಸದಸ್ಯರ ರಕ್ಷಣೆಗೆ ಹರಸಾಹಸ ಪಡುತ್ತಿದ್ದಾರೆ. ಆದರೆ ಮಳೆಯಿಂದಾಗಿ ಘಟನಾ ಸ್ಥಳಕ್ಕೆ ರಕ್ಷಣಾ ತಂಡ ಇನ್ನೂ ತಲುಪಿಲ್ಲ. ಗೋಹರ್ ಉಪವಿಭಾಗದ ಹತ್ತಾರು ಸ್ಥಳಗಳಲ್ಲಿ ಭಾರೀ ಭೂಕುಸಿತದಿಂದಾಗಿ ಅನೇಕ ರಸ್ತೆಗಳ ಸಂಚಾರ ಸ್ಥಗಿತಗೊಂಡಿವೆ. ಗೋಹರ್ ಆಡಳಿತದ ಅಧಿಕಾರಿಯೊಬ್ಬರು ರಸ್ತೆ ತಡೆಯಿಂದಾಗಿ ಸಿಲುಕಿಕೊಂಡಿದ್ದಾರೆ. ಲೋಕೋಪಯೋಗಿ ಇಲಾಖೆಯ ಜೆಸಿಬಿ ಯಂತ್ರದ ಮೂಲಕ ರಸ್ತೆಗಳ ಪುನಶ್ಚೇತನಕ್ಕೆ ಪ್ರಯತ್ನಿಸುತ್ತಿದೆ.
ಘಟನಾ ಸ್ಥಳ ತಲುಪಲು ರಕ್ಷಣಾ ತಂಡಕ್ಕೆ ರಸ್ತೆ ಸಮಸ್ಯೆ: ರಕ್ಷಣಾ ತಂಡವು ಸ್ಥಳಕ್ಕೆ ತಲುಪುವಲ್ಲಿ ಸಮಸ್ಯೆ ಎದುರಿಸುತ್ತಿದೆ. ತಂಡವು ಮುಂಜಾನೆ 4 ಗಂಟೆಯಿಂದ ಸ್ಥಳಕ್ಕೆ ತೆರಳಿದೆ. ಆದರೆ, ರಸ್ತೆಗಳು ಸ್ಥಗಿತಗೊಂಡ ಪರಿಣಾಮ ಘಟನಾ ಸ್ಥಳಕ್ಕೆ ತಲುಪುವುದು ಕಷ್ಟಕರವಾಗಿದೆ. ಅವಶೇಷಗಳಡಿ ಸಿಲುಕಿರುವ ಜನರನ್ನು ರಕ್ಷಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ. ಹವಾಮಾನ ಇಲಾಖೆ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಇದರಿಂದ ಮಂಡಿ ಆಡಳಿತ ಇಂದು ಶಾಲೆಗಳಿಗೆ ರಜೆ ನೀಡಿದೆ ಎಂದು ಎಸ್‌ಡಿಎಂ ಗೋಹರ್ ರಾಮನ್ ಶರ್ಮಾ ಹೇಳಿದರು
ಓದಿ:ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮುನ್ಸೂಚನೆ