ತೇಜ್‌ಪುರ (ಅಸ್ಸಾಂ):ಅರುಣಾಚಲ ಪ್ರದೇಶದತವಾಂಗ್ ಸೆಕ್ಟರ್‌ನ ಸೇನೆಯ ಮುಂಚೂಣಿ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ದಿಢೀರ್ ಹಿಮಕುಸಿತ ಉಂಟಾಗಿ ಓರ್ವ ಯೋಧ ನಿಧನ ಹೊಂದಿದ್ದಾರೆ. ಹಿಮಗಡ್ಡೆಯ ಕೆಳಗೆ ಇವರು ಸಿಲುಕಿದ್ದರು. ತೀವ್ರ ರಕ್ತಸ್ರಾವವಾಗಿತ್ತು. ಇವರೊಂದಿಗಿದ್ದ ಉಳಿದ ಯೋಧರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಸುಬೇದಾರ್ ಎ.ಎಸ್.ಧಗಲ್ ಮೃತರು. ಇವರು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ನಿವಾಸಿ. ಚೀನಾ ಗಡಿಗೆ ಹೊಂದಿಕೊಂಡಿರುವ ತವಾಂಗ್ ಸೆಕ್ಟರ್‌ನ ಮುಂಚೂಣಿ ಪ್ರದೇಶದಲ್ಲಿ ಮಾರ್ಚ್ 27 ರಂದು ಹಿಮಕುಸಿತ ಉಂಟಾಗಿತ್ತು. ಕಾರ್ಯಾಚರಣೆಯಲ್ಲಿದ್ದ ಸೇನಾ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಇತರೆ ಯೋಧರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು. ಆದರೆ, ಧಗಲ್ ಅವರು ನಾಪತ್ತೆಯಾಗಿದ್ದರು.
6 ರಿಂದ 7 ಅಡಿಯಷ್ಟು ಬಿದ್ದಿದ್ದ ಹಿಮ ರಾಶಿಯಡಿ ಧಗಲ್ ಕಣ್ಮರೆಯಾಗಿದ್ದರು. ಕೂಡಲೇ ಪತ್ತೆಗೆ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಭಾರಿ ಪ್ರಮಾಣದಲ್ಲಿ ಹಿಮಪಾತವಾದ ಕಾರಣ ಶೋಧ ಕಾರ್ಯಾಚರಣೆ ಆರಂಭದಲ್ಲಿ ಬಹಳ ಕಷ್ಟಕರವಾಗಿತ್ತು. ಸೇನಾ ಸಿಬ್ಬಂದಿಯ ನಿರಂತರ ಕಾರ್ಯಾಚರಣೆಯ ಬಳಿಕ ಸುಬೇದಾರ ಧಗಲ್ ಅವರ ದೇಹವನ್ನು ಪತ್ತೆ ಮಾಡಿ, ಹಿಮದ ರಾಶಿಯಿಂದ ಹೊರತೆಗೆಯಲಾಯಿತು. ಹಿಮಬಂಡೆಗಳ ಅಡಿಯಲ್ಲಿ ಬಿದ್ದು ಸುಬೇದಾರ್ ತೀವ್ರ ಗಾಯಗೊಂಡು ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಇಲಾಖೆಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್ ತಿಳಿಸಿದ್ದಾರೆ.