ಹೈದರಾಬಾದ್:ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅವರು ನ್ಯಾಯಮೂರ್ತಿ ಎನ್.ವಿ. ರಮಣ ಅವರನ್ನು ಹಿರಿತನ ಮತ್ತು ಅವರು ನೀಡಿರುವ ಐತಿಹಾಸಿಕ ತೀರ್ಪುಗಳ ಮಾನದಂಡಗಳಿಗೆ ಅನುಗುಣವಾಗಿ ಭಾರತದ 48ನೇ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಿದ್ದಾರೆ. ಈ ಹಿನ್ನೆಲೆ ಎನ್.ವಿ. ರಮಣ ಅವರು ನೀಡಿರುವ ಕೆಲವು ಪ್ರಮುಖ ತೀರ್ಪುಗಳು ಇಂತಿವೆ.
ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಲೇವಾರಿಗೆ ಆದೇಶ:
ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ನ್ಯಾಯಪೀಠವು 2019 ರ ಸೆಪ್ಟೆಂಬರ್ 17 ರಂದು, ಸಂಸದರು ಮತ್ತು ಶಾಸಕರ ವಿರುದ್ಧ ದಾಖಲಾದ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ಎಲ್ಲಾ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ಪಟ್ಟಿ ಮಾಡಬೇಕಾಗಿದೆ ಎಂದು ಆದೇಶ ಹೊರಡಿಸಿತ್ತು.
ಗೃಹಿಣಿಯರ ಮನೆಕೆಲಸಗಳಿಗೂ ಮನ್ನಣೆ ನೀಡಿದ್ದು:
ಜನವರಿ 2021 ರಲ್ಲಿ, ನ್ಯಾಯಮೂರ್ತಿ ಎನ್.ವಿ. ರಮಣ ಮತ್ತು ಸೂರ್ಯಕಾಂತ್ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠವು ಮನೆಕೆಲಸ ಮಾಡುವ ಮಹಿಳೆಯ ಕೆಲಸವು ತನ್ನ ಗಂಡನ ಕಚೇರಿ ಕೆಲಸಕ್ಕಿಂತ ಕಡಿಮೆಯಿಲ್ಲ ಎಂದು ತೀರ್ಪು ನೀಡಿತ್ತು. 2001ರ ಲತಾ ವಾಧ್ವಾ ಪ್ರಕರಣದಲ್ಲಿ ಉನ್ನತ ನ್ಯಾಯಾಲಯವು ಹೇಳಿದ ವಿಚಾರಕ್ಕೆ ಮಹತ್ವ ನೀಡಿದ ನ್ಯಾಯಮೂರ್ತಿ ಎನ್.ವಿ. ರಮಣ, ಗೃಹಿಣಿಯರು ಮನೆಯಲ್ಲಿ ಸಲ್ಲಿಸಿದ ಸೇವೆಗಳ ಆಧಾರದ ಮೇಲೆ ಅವರೂ ಸಂಬಳ ಅಥವಾ ಹಣ ಪಡೆಯಬೇಕು ಎಂದಿದ್ದರು.
ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಶಾಶ್ವತ ಆಯೋಗ:
2018 ರಲ್ಲಿ, ನ್ಯಾಯಮೂರ್ತಿ ಎನ್.ವಿ. ರಮಣ ಅವರು ಮಹಿಳಾ ಅಧಿಕಾರಿಗಳಿಗೆ ಸಶಸ್ತ್ರ ಪಡೆಗಳಲ್ಲಿ ಶಾಶ್ವತ ಆಯೋಗವನ್ನು ನೀಡದಿರುವ ಬಗ್ಗೆ ಕೇಂದ್ರವನ್ನು ದೂಷಿಸಿದ್ದರು. ಈ ನಿಟ್ಟಿನಲ್ಲಿ ತಾರತಮ್ಯದ ವಿಧಾನವನ್ನು ಅನುಸರಿಸದಂತೆ ಕೇಂದ್ರಕ್ಕೆ ಸೂಚಿಸಿದ್ದರು ಮತ್ತು ಕೇಂದ್ರದ ಕಿರು ಸೇವಾ ಆಯೋಗದಿಂದ (ಎಸ್‌ಎಸ್‌ಸಿ) ಶೀಘ್ರ ಪ್ರತಿಕ್ರಿಯೆ ಕೋರಿದ್ದರು.
ಎಂಡಿ ಅನ್ವರ್ V/S ವಿ. ದೆಹಲಿಯ ಎನ್‌ಸಿಟಿ ರಾಜ್ಯ, 2020:
ಮಾನಸಿಕ ಅಸ್ವಸ್ಥತೆಯ ಕಾರಣದಿಂದ ಆರೋಪಿಯೊಬ್ಬ ಕಾನೂನು ಕ್ರಮದಿಂದ ರಕ್ಷಣೆ ಪಡೆಯಬೇಕಾದರೆ, ಐಪಿಸಿ ಸೆಕ್ಷನ್ 84ರ ಪ್ರಕಾರ ಆತ ಅಥವಾ ಆಕೆ ತಾನು ವಾಸ್ತವದಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಬಗ್ಗೆ ಯಾವುದೇ ಸಂಶಯವಿರದಂತೆ ಸಾಬೀತು ಪಡಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಎನ್.ವಿ. ರಮಣ, ಎಸ್.ಎ. ನಜೀರ್ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಪೀಠವು ಹೇಳಿತ್ತು.
ಉನ್ನತ ನ್ಯಾಯಪೀಠಕ್ಕೆ 370 ನೇ ವಿಧಿ ಉಲ್ಲೇಖವನ್ನು ಕಳಿಸಲು ನಿರಾಕರಿಸಿದ್ದು:
ಡಾ. ಷಾ ಫಾಯಿಸಲ್ ಮತ್ತು ಇತರರಿಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜಯ್ ಕಿಶನ್ ಕೌಲ್, ಆರ್. ಸುಭಾಷ್ ರೆಡ್ಡಿ, ಬಿ.ಆರ್. ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಪೀಠ, ಸಂವಿಧಾನದ 370 ನೇ ವಿಧಿ ಅನ್ವಯ ಜೆ & ಕೆ ನಲ್ಲಿ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವುದಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ಯವರ ಆದೇಶಗಳನ್ನು ಪ್ರಶ್ನಿಸುವ ಅರ್ಜಿಗಳಿಗೆ ದೊಡ್ಡ ನ್ಯಾಯಪೀಠವನ್ನು ಉಲ್ಲೇಖಿಸುವ ಅಗತ್ಯವನ್ನು ಪೀಠ ನಿರಾಕರಿಸಿತ್ತು.
2012 ರ ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗಲ್ಲುಶಿಕ್ಷೆಯೇ ಸರಿ ಎಂದಿದ್ದು:
ಪವನ್ ಕುಮಾರ್ ಗುಪ್ತಾ ವರ್ಸಸ್ ಸ್ಟೇಟ್ ಆಫ್ ಎನ್‌ಸಿಟಿ ದೆಹಲಿ ಪ್ರಕರಣದ ವಿಚಾರಣೆ ನಡೆಸುತ್ತಿರುವಾಗ, ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಅರುಣ್ ಮಿಶ್ರಾ, ರೋಹಿಂಗ್ಟನ್ ಫಾಲಿ ನಾರಿಮನ್, ಆರ್. ಭಾನುಮತಿ, ಅಶೋಕ್ ಭೂಷಣ್ ನೇತೃತ್ವದ ಪೀಠ 2012 ರ ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣವನ್ನು ವಜಾ ಮಾಡುವಂತೆ ಮತ್ತು ಕ್ಷಮಾದಾನ ಕೋರಿ ದೆಹಲಿ ಗ್ಯಾಂಗ್ ರೇಪ್ ಆರೋಪಿಗಳು ರಾಷ್ಟ್ರಪತಿಗಳಿಗೆ ಸಲ್ಲಿಸಿದ್ದ ಮನವಿಯನ್ನು ಅವರು ತಿರಸ್ಕರಿಸಿದ ಕುರಿತಂತೆ ಸಲ್ಲಿಸಿದ್ದ ಕೊನೆಯ ಮೇಲ್ಮನವಿಯನ್ನು ಈ ನ್ಯಾಯಪೀಠ ತಿರಸ್ಕರಿಸಿತ್ತು. (2020 ಮಾರ್ಚ್ 20 ರಂದು ತಿಹಾರ್ ಜೈಲಿನಲ್ಲಿ ಎಲ್ಲಾ ಆರೋಪಿಗಳನ್ನು ಗಲ್ಲಿಗೇರಿಸಲಾಗಿದೆ)