ಗುಂಟೂರು: ಜಿಲ್ಲೆಯ ವೆಲ್ದುರ್ತಿ ಮಂಡಲದ ಬೋದಿಲವಿಡು ಗ್ರಾಮದ ಸಮೀಪ 50 ರಿಂದ 60 ಅಡಿಗಳಷ್ಟು ಭೂಕುಸಿತ ಉಂಟಾಗಿ ಅಲ್ಲಿನ ಜನರಲ್ಲಿ ಆತಂಕ ಉಂಟು ಮಾಡಿದೆ.
ಈ ಗ್ರಾಮದಲ್ಲಿ 2 ವರ್ಷಗಳಿಂದ ಪದೇ ಪದೇ ಭೂಕುಸಿತ ಉಂಟಾಗುತ್ತಿದೆ ಎಂಬುದು ಆಶ್ಚರ್ಯದ ಸಂಗತಿ. ಕುಸಿತ ಉಂಟಾದ ಭೂಮಿಯಲ್ಲಿ ಕೃಷಿ ಕಾರ್ಯ ಮಾಡಲು ರೈತರು ಹೆದರುವಂತಾಗಿದೆ. ಅಲ್ಲದೇ ಭೂಕುಸಿತದ ಜಾಗದಲ್ಲಿ ಭಾರಿ ಪ್ರಮಾಣದ ಬಂಡೆಕಲ್ಲು ಕಾಣಿಸಿಕೊಂಡಿದೆ.
2019 ರಲ್ಲಿಯೂ ಕೂಡ ಬೋದಿಲವಿಡು ಮತ್ತು ಗುಂಡ್ಲಪಾಡು ಗ್ರಾಮಗಳ ನಡುವೆ ಸುಮಾರು 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಭೂಕುಸಿತ ಸಂಭವಿಸಿತ್ತು. ಬಳಿಕ 2020 ರಲ್ಲಿ ಇದೇ ಗ್ರಾಮದ ವಿದ್ಯುತ್ ಉಪಕೇಂದ್ರದ ಬಳಿ 60 ಅಡಿಗಳಷ್ಟು ಭೂಮಿ ಕುಸಿದು ಬಂಡೆಗಲ್ಲು ಕಾಣಿಸಿಕೊಂಡಿತ್ತು. ಇದೀಗ ಮತ್ತೆ ಕುಸಿತ ಉಂಟಾಗಿದ್ದು ಆತಂಕವನ್ನು ಹೆಚ್ಚಿಸಿದೆ.
ಬೋದಿಲವಿಡು ಗ್ರಾಮಸ್ಥರು ಕೃಷಿಯನ್ನೇ ಅವಲಂಬಿಸಿದ್ದಾರೆ. ಅಲ್ಲದೇ 1000 ದಿಂದ 1200 ಅಡಿಗಳಷ್ಟು ಒಳಗೆ ಬೋರ್ವೆಲ್ಗಳನ್ನು ಕೊರೆಸಲಾಗಿದೆ. ಇಷ್ಟು ಪ್ರಮಾಣದಲ್ಲಿ ಭೂಮಿಯನ್ನು ಕೊರೆದ ಕಾರಣ ಕುಸಿತ ಉಂಟಾಗುತ್ತಿದೆ ಎಂದು ಅನುಮಾನಿಸಲಾಗಿದೆ.