ಕರ್ನಾಟಕ

karnataka

ETV Bharat / bharat

ಉದ್ಯೋಗಕ್ಕಾಗಿ ಭೂಮಿ ಹಗರಣ: ಸಿಬಿಐನಿಂದ ಲಾಲು ಯಾದವ್ ವಿಚಾರಣೆ

ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಸಿಬಿಐ, ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರನ್ನು ವಿಚಾರಣೆಗೊಳಪಡಿಸಿದೆ. ಪುತ್ರಿ ಮೀಸಾ ಭಾರತಿ ನಿವಾಸದಲ್ಲಿ ಲಾಲು ಅವರ ವಿಚಾರಣೆ ನಡೆದಿದೆ.

CBI questions Lalu Prasad in land for jobs scam case
CBI questions Lalu Prasad in land for jobs scam case

By

Published : Mar 7, 2023, 1:36 PM IST

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮಂಗಳವಾರ ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ಅವರನ್ನು ವಿಚಾರಣೆ ನಡೆಸುತ್ತಿದೆ. ಪುತ್ರಿ ಮಿಸಾ ಭಾರತಿಯವರ ಪಂಡಾರಾ ಪರಾಕ್ ನಿವಾಸದಲ್ಲಿ ಲಾಲು ಯಾದವ್ ಅವರ ವಿಚಾರಣೆ ನಡೆಯುತ್ತಿದೆ. ಮಿಸಾ ಭಾರತಿ ಪ್ರಸ್ತುತ ರಾಜ್ಯಸಭಾ ಸದಸ್ಯೆಯಾಗಿದ್ದಾರೆ. ಸಿಬಿಐ ತನಿಖೆಗೆ ಸಹಕರಿಸುವುದಾಗಿ ಲಾಲು ಯಾದವ್ ಕುಟುಂಬದವರು ಹೇಳಿದ್ದಾರೆ. ಇದೇ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ನಿವಾಸಕ್ಕೆ ತೆರಳಿದ ಸಿಬಿಐ ರಾಬ್ರಿ ಅವರನ್ನು ವಿಚಾರಣೆ ಮಾಡಿತ್ತು. ಅದಾಗಿ ಒಂದು ದಿನದ ನಂತರ ಲಾಲು ಪ್ರಸಾದ್ ಯಾದವ್ ಅವರ ವಿಚಾರಣೆ ನಡೆಯುತ್ತಿದೆ.

ಕೆಲ ದಿನಗಳ ಹಿಂದೆ, ಉದ್ಯೋಗಕ್ಕಾಗಿ ಜಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಯಾದವ್‌ಗೆ ಸಿಬಿಐ ನೋಟಿಸ್ ನೀಡಿತ್ತು. ಸಿಬಿಐ ಶೀಘ್ರದಲ್ಲೇ ಲಾಲು ಯಾದವ್ ಅವರನ್ನು ಪ್ರಶ್ನಿಸುವ ಸಾಧ್ಯತೆಯಿದೆ ಎಂದು ಸಿಬಿಐ ಅಧಿಕಾರಿಯೊಬ್ಬರು ಸೋಮವಾರ ಮಾಧ್ಯಮಗಳಿಗೆ ತಿಳಿಸಿದ್ದರು. ಇದರ ನಂತರ ಸೋಮವಾರ ಬೆಳಗ್ಗೆ ಸಿಬಿಐ ತಂಡವು ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ಪಾಟ್ನಾದಲ್ಲಿರುವ ನಿವಾಸಕ್ಕೆ ತಲುಪಿತ್ತು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಲಾಲು ಪ್ರಸಾದ್ ಯಾದವ್, ರಾಬ್ರಿ ದೇವಿ, ಅವರ ಪುತ್ರಿ ಮಿಸಾ ಭಾರತಿ ಮತ್ತು ಇತರ 13 ಜನರ ವಿರುದ್ಧ ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು. ಆರೋಪಿಗಳು ಆಗಿನ ಸೆಂಟ್ರಲ್ ರೈಲ್ವೇಸ್ ಜಿಎಂ ಮತ್ತು ಸಿಪಿಒ ಅವರೊಂದಿಗೆ ಸೇರಿಕೊಂಡು ಪಿತೂರಿ ನಡೆಸಿದ್ದು, ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದರ ಬದಲಿಗೆ ತಮ್ಮ ಹೆಸರಿಗೆ ಅಥವಾ ತಮ್ಮ ಹತ್ತಿರದ ಸಂಬಂಧಿಗಳ ಹೆಸರಿನಲ್ಲಿ ಭೂಮಿ ಪಡೆದಿರುವುದು ತನಿಖೆಯ ಸಂದರ್ಭದಲ್ಲಿ ಕಂಡುಬಂದಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

ಈ ಭೂಮಿಯನ್ನು ಚಾಲ್ತಿಯಲ್ಲಿರುವ ಸರ್ಕಾರಿ ದರಕ್ಕಿಂತ ಕಡಿಮೆ ದರದಲ್ಲಿ ಮತ್ತು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಅಭ್ಯರ್ಥಿಗಳು ನಕಲಿ ವರ್ಗಾವಣೆ ಪ್ರಮಾಣ ಪತ್ರಗಳನ್ನು ಬಳಸಿದ್ದಾರೆ ಮತ್ತು ಸುಳ್ಳು ದೃಢೀಕೃತ ದಾಖಲೆಗಳನ್ನು ರೈಲ್ವೆ ಸಚಿವಾಲಯಕ್ಕೆ ಸಲ್ಲಿಸಿದ್ದಾರೆ ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ. 2004 ಮತ್ತು 2009 ರ ನಡುವೆ ಲಾಲು ಯಾದವ್ ಅವರು ರೈಲ್ವೆ ಸಚಿವರಾಗಿದ್ದಾಗ ಈ ಹಗರಣ ನಡೆದಿದೆ. ಆರೋಪಪಟ್ಟಿಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥರಲ್ಲದೆ ಆಗಿನ ರೈಲ್ವೆ ಜನರಲ್ ಮ್ಯಾನೇಜರ್ ಹೆಸರೂ ಇದೆ.

ಬೇರೆ ಯಾವುದೇ ಅಭ್ಯರ್ಥಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಕೆಲ ಅಭ್ಯರ್ಥಿಗಳನ್ನು ಮಾತ್ರ ನೌಕರಿಗಾಗಿ ಪರಿಗಣಿಸಲಾಗಿದೆ ಮತ್ತು ಅವರನ್ನು ನೇಮಕಾತಿ ಮಾಡುವ ಯಾವುದೇ ತುರ್ತು ಸಂದರ್ಭ ಇರಲಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಅಭ್ಯರ್ಥಿಗಳ ಅರ್ಜಿಗಳಲ್ಲಿ ಹಲವಾರು ವ್ಯತ್ಯಾಸಗಳು ಕಂಡುಬಂದಿವೆ. ಇಂಥ ಅಭ್ಯರ್ಥಿಗಳು ಸಲ್ಲಿಸಿರುವ ದಾಖಲೆಗಳ ಆಧಾರದ ಮೇಲೆ ಇವರ ಅರ್ಜಿಗಳನ್ನು ಪರಿಗಣಿಸಬಾರದಿತ್ತು. ಆದಾಗ್ಯೂ ಅವರನ್ನು ಪರಿಗಣಿಸಲಾಗಿದೆ ಮತ್ತು ಅವರನ್ನು ನೇಮಕಾತಿ ಮಾಡಲಾಗಿದೆ ಎಂದು ಸಿಬಿಐ ಹೇಳಿದೆ.

ಇದನ್ನೂ ಓದಿ : ಬಿಹಾರದಲ್ಲಿ ದಲಿತ ಮಹಾದಲಿತರ ಸ್ಥಿತಿ ಶೋಚನೀಯ: ಪ್ರಶಾಂತ್ ಕಿಶೋರ್ ವಾಗ್ದಾಳಿ

ABOUT THE AUTHOR

...view details