ನವದೆಹಲಿ: ರೈಲ್ವೆ ಇಲಾಖೆಯಲ್ಲಿನ ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಆರ್ಡಿಜೆ ವರಿಷ್ಠ ಲಾಲು ಪ್ರಸಾದ್ ಕುಟುಂಬ ಸದಸ್ಯರು ಇಂದು ಕೇಂದ್ರ ತನಿಖಾ ಸಂಸ್ಥೆಗಳ ವಿಚಾರಣೆ ಎದುರಿಸಿದರು. ಲಾಲು ಪುತ್ರರಾದ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಕೇಂದ್ರೀಯ ತನಿಖಾ ದಳ (ಸಿಬಿಐ)ದ ಮುಂದೆ ಹಾಜರಾದರೆ, ಪುತ್ರಿಯಾದ ಆರ್‌ಜೆಡಿ ಸಂಸದೆ ಮಿಸಾ ಭಾರ್ತಿ ಕೂಡ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ಎದುರಿಸಿದರು.
ದೆಹಲಿಯಲ್ಲಿರುವ ಸಿಬಿಐ ಪ್ರಧಾನ ಕಚೇರಿಗೆ ಶನಿವಾರ ಬೆಳಗ್ಗೆ 10:30ರ ಸುಮಾರಿಗೆ ತೇಜಸ್ವಿ ಯಾದವ್ ಆಗಮಿಸಿದರು. ನಂತರ ಅಗತ್ಯ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ಅವರನ್ನು ವಿಚಾರಣೆಗೆ ತನಿಖಾ ಅಧಿಕಾರಿಗಳು ಕರೆದೊಯ್ದರು. ನಂತರ ಮಧ್ಯಾಹ್ನದ ಊಟಕ್ಕೆ ಬಿಡುವು ನೀಡಲಾಯಿತು. ಅಲ್ಲಿಂದ ನೇರವಾಗಿ ದಕ್ಷಿಣ ದೆಹಲಿಯ ಆಸ್ಪತ್ರೆಯಲ್ಲಿ ದಾಖಲಾಗಿರುವ ತಮ್ಮ ಗರ್ಭಿಣಿ ಪತ್ನಿಯನ್ನು ಭೇಟಿ ಮಾಡಲು ತೇಜಸ್ವಿ ತೆರಳಿದರು. ಇದಾದ ಬಳಿಕ ತೇಜಸ್ವಿ ಮತ್ತೆ ಸಿಬಿಐ ಕಚೇರಿಗೆ ಬಂದು ವಿಚಾರಣೆ ಎದುರಿಸಿದರು.
ತನಿಖಾ ಸಂಸ್ಥೆಗಳಿಗೆ ಸಹಕರಿಸುತ್ತೇವೆ - ತೇಜಸ್ವಿ:ಇದಕ್ಕೂ ಮೊದಲು ದೆಹಲಿಯ ನಿವಾಸದಿಂದ ಸಿಬಿಐ ಕಚೇರಿಗೆ ತೆರಳುವಾಗ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ತೇಜಸ್ವಿ, ತನಿಖಾ ತಂಡಗಳು ಪ್ರಕರಣಗಳನ್ನು ದಾಖಲಿಸಿದ ಪ್ರತಿ ಸಂದರ್ಭದಲ್ಲೂ ನಾನು ಸಹಕರಿಸುತ್ತಿದ್ದೇವೆ. ಸದ್ಯದ ದೇಶದಲ್ಲಿ ಪರಿಸ್ಥಿತಿ ಏನಾಗಿದೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯ. ತಲೆ ಭಾಗಿಸುವುದು ತುಂಬಾ ಸುಲಭ. ಆದರೆ, ಹೋರಾಡುವುದು ಬಳಹ ಕಷ್ಟಕರ. ನಾವು ಇದರ ವಿರುದ್ಧ ಹೋರಾಡಲು ನಿರ್ಧರಿಸಿದ್ದೇವೆ ಮತ್ತು ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಮತ್ತೊಂದೆಡೆ, ಇದೇ ಪ್ರಕರಣದಲ್ಲಿ ತೇಜಸ್ವಿ ಯಾದವ್ ಅವರ ಸಹೋದರಿ ಮತ್ತು ಆರ್‌ಜೆಡಿ ರಾಜ್ಯಸಭಾ ಸದಸ್ಯೆ ಮಿಸಾ ಭಾರ್ತಿ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು. ಇಡಿ ಕಚೇರಿಯಲ್ಲಿ ವಿಚಾರಣೆ ಎದುರಿಸಿದ ಮಿಸಾ ಮಧ್ಯಾಹ್ನದ ವೇಳೆಗೆ ಅಲ್ಲಿಂದ ಆಗಮಿಸಿದರು. ತೇಜಸ್ವಿ ಮತ್ತು ಮಿಸಾ ಭಾರ್ತಿ ವಿಚಾರಣೆಗೆ ಹಾಜರಾದ ಬಗ್ಗೆ ತಾಯಿ, ಬಿಹಾರದ ಮಾಜಿ ಸಿಎಂ ರಾಬ್ರಿ ದೇವಿ ಮಾತನಾಡಿ, ನಾವು ನ್ಯಾಯಾಲಯಗಳ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ನ್ಯಾಯಾಲಯಗಳು ಏನು ಹೇಳುತ್ತವೋ ಅದನ್ನು ಮಾಡುತ್ತೇವೆ. ನಮಗೆ ನ್ಯಾಯಾಲಯದ ಮೇಲೆ ಸಂಪೂರ್ಣ ನಂಬಿಕೆಯಿದೆ ಎಂದು ತಿಳಿಸಿದ್ದಾರೆ.
ಏನಿದು ಹಗರಣ?: ಲಾಲು ಪ್ರಸಾದ್ 2005ರಿಂದ 2009ರವರೆಗೆ ಕೇಂದ್ರ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಉದ್ಯೋಗಕ್ಕಾಗಿ ಭೂ ಹಗರಣ ನಡೆದಿದೆ ಎನ್ನಲಾಗಿದೆ. ಜನರಿಗೆ ಉದ್ಯೋಗಗಳನ್ನು ನೀಡಿ ಅವರ ಜಮೀನುಗಳನ್ನು ಆಪ್ತ ಸಹಾಯಕರ ಹೆಸರಿಗೆ ನೋಂದಾಯಿಸಲಾಗಿದೆ. ನಂತರ ಅದೇ ಜಮೀನುಗಳನ್ನು ಲಾಲು ಪ್ರಸಾದ್ ಅವರ ಕುಟುಂಬದ ಸದಸ್ಯರ ಹೆಸರಿಗೆ ವರ್ಗಾಯಿಸಿದ ಆರೋಪ ಇದೆ. ಈ ಬಗ್ಗೆ ಸಿಬಿಐ ಮತ್ತು ಇಡಿ ಪ್ರತ್ಯೇಕ ತನಿಖೆ ನಡೆಸುತ್ತೇವೆ.
ಈ ಸಂಬಂಧ ಲಾಲು ಪ್ರಸಾದ್, ರಾಬ್ರಿ ದೇವಿ, ಮಿಸಾ ಭಾರತಿ ಸೇರಿದಂತೆ 16 ಆರೋಪಿಗಳಿಗೆ ಈ ಹಿಂದೆ ಸಿಬಿಐ ಸಮನ್ಸ್ ಜಾರಿ ಮಾಡಿತ್ತು. ಅಲ್ಲದೇ, ಬಿಹಾರದ ಪಾಟ್ನಾದಲ್ಲಿರುವ ನಿವಾಸದಲ್ಲಿ ಲಾಲು ಕುಟುಂಬದವರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಇತ್ತೀಚೆಗೆ ಜಾರಿ ನಿರ್ದೇಶನಾಲಯವು ಲೆಕ್ಕಕ್ಕೆ ಸಿಗದ ಒಂದು ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿತ್ತು. ಅಷ್ಟೇ ಅಲ್ಲ, ಶೋಧ ಕಾರ್ಯದ ವೇಳೆ 600 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆದಾಯವನ್ನು ಪತ್ತೆ ಮಾಡಿತ್ತು.
ಇದನ್ನೂ ಓದಿ:ತಂದೆಗೆ ಅನಗತ್ಯ ಕಿರುಕುಳ.. ಅವರಿಗೆ ಸಮಸ್ಯೆಯಾದರೆ ಯಾರನ್ನೂ ಬಿಡುವುದಿಲ್ಲ: ಲಾಲು ಪುತ್ರಿ ರೋಹಿಣಿ ಕಿಡಿ