ನವದೆಹಲಿ: ಭೂಸ್ವಾಧೀನ ಸಮಸ್ಯೆಗಳಿಂದಾಗಿ ಸ್ಥಗಿತಗೊಂಡಿದ್ದ ಮುಂಬೈ - ಅಹಮದಾಬಾದ್ ನಡುವಿನ ಬುಲೆಟ್ ಟ್ರೈನ್ ಯೋಜನೆಯ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಈ ಯೋಜನೆಯು ಗುಜರಾತ್ ಮತ್ತು ಮಹಾರಾಷ್ಟ್ರದ ನಡುವೆ ದಾದ್ರಾ ಮತ್ತು ನಗರ ಹವೇಲಿ ಮೂಲಕ 508.17 ಕಿ.ಮೀ ರೈಲು ಮಾರ್ಗವನ್ನು ಹೊಂದಿದೆ. ಈ ಪೈಕಿ ಗುಜರಾತ್‌ನಲ್ಲಿ 348.04 ಕಿ.ಮೀ ಮಾರ್ಗದಲ್ಲಿ ರೈಲು ಚಲಿಸುತ್ತದೆ. ರೈಲ್ವೆ ಮಂಡಳಿಯ ಮುಖ್ಯಸ್ಥರ ಪ್ರಕಾರ, ಈ ವಿಸ್ತರಣೆಯ ಪ್ರಮುಖ ಭಾಗಕ್ಕೆ ಈಗಾಗಲೇ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.
ಈ ಯೋಜನೆಗೆ ಅಗತ್ಯವಿರುವ ಶೇ 95 ರಷ್ಟು ಭೂಮಿಯನ್ನು ಗುಜರಾತ್‌ನಲ್ಲಿ ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ರೈಲ್ವೆ ಮಂಡಳಿಯ ಸಿಇಒ ಮತ್ತು ಅಧ್ಯಕ್ಷ ಸುನೀತ್ ಶರ್ಮಾ ಹೇಳಿದ್ದಾರೆ. ನಾವು ಸಿವಿಲ್ ಇಂಜಿನಿಯರಿಂಗ್ ಕಾಮಗಾರಿಗಳಿಗೆ 327 ಕಿಮೀ (348.04 ಕಿಮೀ) ವಿಸ್ತಾರದಲ್ಲಿ ಗುತ್ತಿಗೆ ನೀಡಿದ್ದು, ಕೆಲಸ ಪ್ರಾರಂಭವಾಗಿದೆ. ಆದರೆ, ಇನ್ನೂ ಮಹಾರಾಷ್ಟ್ರದಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿಲ್ಲ. ನಾವು ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ನಾವು ಅಲ್ಲಿ ಕೆಲಸ ಪ್ರಾರಂಭಿಸುತ್ತೇವೆ ಎಂದು ಹೇಳಿದರು.