ಪಾಟ್ನಾ (ಬಿಹಾರ): ರೈಲ್ವೆ ಇಲಾಖೆಯಲ್ಲಿನ ಉದ್ಯೋಗಕ್ಕಾಗಿ ಭೂ ಹಗರಣವು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ವರಿಷ್ಠ ಲಾಲ್ ಪ್ರಸಾದ್ ಕುಟುಂಬಕ್ಕೆ ಉರುಳಾಗಿದೆ. ಸೋಮವಾರದಿಂದ ಲಾಲು ಪ್ರಸಾದ್, ಪತ್ನಿ ರಾಬ್ರಿ ದೇವಿ ಮತ್ತು ಪುತ್ರಿ, ರಾಜ್ಯಸಭಾ ಸದಸ್ಯೆ ಮಿಸಾ ಭಾರ್ತಿ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಇದರ ನಡುವೆ ಲಾಲು ಅವರ ಮತ್ತೋರ್ವ ಪುತ್ರಿ ರೋಹಿಣಿ ಆಚಾರ್ಯ ಟ್ವೀಟ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ರೈಲ್ವೆ ಇಲಾಖೆಯ ಮಾಜಿ ಸಚಿವರಾದ ಲಾಲು ಪ್ರಸಾದ್ ಇತ್ತೀಚೆಗೆಯಷ್ಟೇ ಕಿಡ್ನಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಪುತ್ರಿ ರೋಹಿಣಿ ಆಚಾರ್ಯ ತಂದೆಗೆ ಕಿಡ್ನಿ ದಾನ ಮಾಡಿದ್ದರು. ಇದೀಗ ಲಾಲು ಅವರನ್ನೂ ವಿಚಾರಣೆ ನಡೆಸುತ್ತಿರುವ ಕಾರಣಕ್ಕೆ ರೋಹಿಣಿ ಸರಣಿ ಟ್ವೀಟ್ ಮಾಡಿ ಸಿಬಿಐ ಅಧಿಕಾರಿಗಳ ಕ್ರಮವನ್ನು ಕೆಣಕಿದ್ದಾರೆ. ತಂದೆಗೆ ಏನಾದರೂ ಆದರೆ ನಾನು ಯಾರನ್ನೂ ಬಿಡುವುದಿಲ್ಲ ಎಂದೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ತಂದೆಗೆ ಅನಗತ್ಯ ಕಿರುಕುಳ: ''ನನ್ನ ತಂದೆಗೆ ಬಹಳ ದಿನಗಳಿಂದ ನಿರಂತರವಾಗಿ ಅನಗತ್ಯ ಕಿರುಕುಳ ನೀಡಲಾಗುತ್ತಿದೆ. ಅವರಿಗೆ ಏನಾದರೂ ಸಂಭವಿಸಿದರೆ ನಾನು ಯಾರನ್ನೂ ಬಿಡುವುದಿಲ್ಲ'' ಎಂದು ರೋಹಿಣಿ ಟ್ವೀಟ್ ಮಾಡಿ ಎಚ್ಚರಿಸಿದ್ದಾರೆ. ಅಲ್ಲದೇ, ''ನೀವು ತಂದೆಗೆ ತೊಂದರೆ ಕೊಡುತ್ತಿದ್ದೀರಿ, ಇದು ಸರಿಯಲ್ಲ. ಇದೆಲ್ಲವೂ ನೆನಪಿನಲ್ಲಿ ಉಳಿಯುತ್ತದೆ. ಸಮಯವು ಅತ್ಯಂತ ಶಕ್ತಿಶಾಲಿ, ಅದು ದೊಡ್ಡ ಶಕ್ತಿಯನ್ನು ಹೊಂದಿದೆ'' ಎಂದಿದ್ದಾರೆ.
''ನಮ್ಮ ತಂದೆ ಲಾಲುಜಿ ಮತ್ತು ತೇಜಸ್ವಿಯವರನ್ನು ಜೈಲಿಗಟ್ಟಲು ಬಿಜೆಪಿಗೆ ಷಡ್ಯಂತ್ರ ಮಾಡುತ್ತಿದೆ. ನಿಮ್ಮ ತೊಂದರೆಯಿಂದ ಅವರಿಗೆ (ಲಾಲು ಪ್ರಸಾದ್) ಏನಾದರೂ ಸಮಸ್ಯೆಯಾದರೆ, ಅವರು ದೆಹಲಿಯ ಕುರ್ಚಿಯನ್ನು ಅಲ್ಲಾಡಿಸುತ್ತಾರೆ. ನಮ್ಮ ಸಹನೆ ಮಿತಿಯೇ ನಿಮಗೆ ಉತ್ತರ ನೀಡುತ್ತಿದೆ. 2024ರಲ್ಲಿ ಜನರೇ ನಿಮ್ಮ ಮೇಲೆ ದಾಳಿ ಮಾಡುತ್ತಾರೆ'' ಎಂದು ಲಾಲು ಪುತ್ರಿ ರೋಹಿಣಿ ಆಚಾರ್ಯ ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ.
ಮನೆಯಲ್ಲೇ ಸಿಬಿಐ ಕಚೇರಿ ತೆಗೆಯಿರಿ ಎಂದು ತೇಜಸ್ವಿ ಕಿಡಿ: ಮತ್ತೊಂದೆಡೆ, ನಿನ್ನೆ ತಮ್ಮ ಕುಟುಂಬದ ಮೇಲೆ ಸಿಬಿಐ ದಾಳಿ ಸಂಬಂಧ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಕೂಡ ಖಾರವಾಗಿ ಪ್ರತಿಕ್ರಿಯಿಸಿದ್ದರು. ಪದೇ ಪದೆ ಮನೆ ಮೇಲೆ ದಾಳಿ ಮಾಡುವುದರಿಂದ ಸರ್ಕಾರದ ಹಣ ಖರ್ಚಾಗುತ್ತದೆ. ಅದರ ಬದಲು ನಮ್ಮ ನಿವಾಸದಲ್ಲಿಯೇ ಸಿಬಿಐ ಕಚೇರಿ ತೆರೆಯಬಹುದು ಎಂದು ಕಿರಿಕಾರಿದ್ದರು.
ಏನಿದು ಪ್ರಕರಣ?: ಲಾಲು ಪ್ರಸಾದ್ 2005ರಿಂದ 2009ರವರೆಗೆ ಕೇಂದ್ರ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಉದ್ಯೋಗಕ್ಕಾಗಿ ಭೂ ಹಗರಣ ನಡೆದಿದೆ. ಜನರಿಗೆ ಉದ್ಯೋಗಗಳನ್ನು ನೀಡಿ ಅವರ ಜಮೀನುಗಳನ್ನು ಆಪ್ತ ಸಹಾಯಕರ ಹೆಸರಿಗೆ ನೋಂದಾಯಿಸಲಾಗಿದೆ. ನಂತರ ಅದೇ ಜಮೀನುಗಳನ್ನು ಲಾಲು ಪ್ರಸಾದ್ ಅವರ ಕುಟುಂಬದ ಸದಸ್ಯರ ಹೆಸರಿಗೆ ವರ್ಗಾಯಿಸಿದ ಆರೋಪ ಇದೆ. ಈ ಸಂಬಂಧ ಲಾಲು ಪ್ರಸಾದ್, ರಾಬ್ರಿ ದೇವಿ, ಮಿಸಾ ಭಾರತಿ ಸೇರಿದಂತೆ 16 ಆರೋಪಿಗಳಿಗೆ ಸಿಬಿಐ ಸಮನ್ಸ್ ಜಾರಿ ಮಾಡಿತ್ತು. ಅಲ್ಲದೇ, ಬಿಹಾರದ ಪಾಟ್ನಾದಲ್ಲಿರುವ ನಿವಾಸದಲ್ಲಿ ಲಾಲು ಕುಟುಂಬದವರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದರು.
ಇದನ್ನೂ ಓದಿ:ಉದ್ಯೋಗಕ್ಕಾಗಿ ಭೂಮಿ ಹಗರಣ: ಸಿಬಿಐನಿಂದ ಲಾಲು ಯಾದವ್ ವಿಚಾರಣೆ