ಪಾಟ್ನಾ (ಬಿಹಾರ): 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳು ಇಂದು ಬಿಹಾರ ರಾಜಧಾನಿ ಪಾಟ್ನಾದಲ್ಲಿ ಮಹತ್ವದ ಸಭೆ ಸೇರಿದವು. ಮುಂದಿನ ದಿನಗಳಲ್ಲಿ ಈ ಸಭೆಯು ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸಲಿದೆ ಎಂದು ಆ ಪಕ್ಷಗಳ ನಾಯಕರು ನಂಬಿದ್ದಾರೆ. ಇದರ ನಡುವೆ ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಇಡೀ ನಾಯಕರನ್ನು ನಗೆಗಡಲಲ್ಲಿ ತೇಲಿಸಿಬಿಟ್ಟರು.
ಇದನ್ನೂ ಓದಿ:ಭಾರತದ ಅಡಿಪಾಯದ ಮೇಲೆ ದಾಳಿ: ರಾಹುಲ್ ಗಾಂಧಿ ಆರೋಪ
ಮುಖ್ಯಮಂತ್ರಿ ನಿತೀಶ್ ಕುಮಾರ್ ನಿವಾಸದಲ್ಲಿ ಮಧ್ಯಾಹ್ನ ನಡೆದ ಸಭೆಯ ನಂತರ ಪ್ರತಿಪಕ್ಷ ನಾಯಕರು ಸಾಲಾಗಿ ಕುಳಿತು ಸುದ್ದಿಗೋಷ್ಠಿ ನಡೆಸಿದರು. ಲಾಲು ಪ್ರಸಾದ್ ತಮ್ಮದೇ ಶೈಲಿಯಲ್ಲಿ ಮಾತನಾಡಿದರು. ಬಿಜೆಪಿ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಧೈರ್ಯ, ಸಾಹಸವನ್ನು ಲಾಲು ಹೊಗಳಿದರು. ಇದೇ ವೇಳೆ, ರಾಹುಲ್‌ಗೆ ಬೇಗ ಮದುವೆಯಾಗುವಂತೆಯೂ ಅವರು ಸಲಹೆ ನೀಡಿ ಇಡೀ ಸುದ್ದಿಗೋಷ್ಠಿಯನ್ನು ನಗೆಗಡಲ್ಲಿ ತೇಲಿಸಿದರು.
''ಇಲ್ಲಿ ರಾಹುಲ್ ಗಾಂಧಿ ಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಭಾರತದಾದ್ಯಂತ ಪಾದಯಾತ್ರೆ ಮೂಲಕ ಸಂಚರಿಸಿದ್ದಾರೆ. ಅದಾನಿ ವಿಚಾರದಲ್ಲಿ ಲೋಕಸಭೆಯಲ್ಲಿ ಉತ್ತಮ ಹೋರಾಟ ನಡೆಸಿದ್ದಾರೆ'' ಎಂದು ಲಾಲು ಹೇಳಿದರು. ಈ ವೇಳೆ, ಪಕ್ಕದಲ್ಲಿ ಕುಳಿತಿದ್ದ ನಿತೀಶ್ ಮಧ್ಯಪ್ರವೇಶಿಸಿ ರಾಹುಲ್ ಗಡ್ಡ ಬೆಳೆಸಿಕೊಂಡಿದ್ದಾರೆ ಎಂದರು. ತಮ್ಮ ಮಾತು ಮುಂದುವರೆಸಿದ ಲಾಲು, ಜಾಸ್ತಿ ಉದ್ಧ ಗಡ್ಡ ಬೆಳೆಸಬೇಡಿ. ನೀವು ಮದುವೆ ಆಗಬೇಕಿತ್ತು. ನಮ್ಮ ಮಾತು ಕೇಳಿಲ್ಲ. ಈಗಲೂ ಸಮಯ ಮೀರಿಲ್ಲ ಎಂದು ಲಾಲು ಹೇಳಿದರು.