ಪಾಟ್ನಾ: ಬಿಹಾರದ ನಿತೀಶ್‌ಕುಮಾರ್ ಸರ್ಕಾರವನ್ನು ಉರುಳಿಸಲು ಮತ್ತು ಆರ್‌ಜೆಡಿಯನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಲಾಲೂ ಪ್ರಸಾದ್ ಯಾದವ್ ಅವರು ಬಿಹಾರದ ಎನ್‌ಡಿಎ ಶಾಸಕರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿಯ ಹಿರಿಯ ಮುಖಂಡ ಸುಶೀಲ್ ಕುಮಾರ್ ಮೋದಿ ಆರೋಪಿಸಿದ್ದಾರೆ.
'ಲಾಲು ಯಾದವ್ ರಾಂಚಿಯಿಂದ ಎನ್‌ಡಿಎ ಶಾಸಕರಿಗೆ ದೂರವಾಣಿ ಕರೆ ಮಾಡುತ್ತಿದ್ದಾರೆ (8051216302) ಮತ್ತು ಮಂತ್ರಿ ಸ್ಥಾನಗಳ ಭರವಸೆ ನೀಡಿದ್ದಾರೆ' ಎಂದು ಸುಶೀಲ್ ಮೋದಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಹಲವಾರು ಮಾಧ್ಯಮಗಳನ್ನು ಟ್ಯಾಗ್ ಮಾಡಿದ್ದಾರೆ.
ಮೇವು ಹಗರಣ ಪ್ರಕರಣದಲ್ಲಿ ಸಿಬಿಐ ವಿಶೇಷ ಕೋರ್ಟ್ನಿಂದ ಶಿಕ್ಷೆಗೊಳಗಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಸದ್ಯ ರಾಂಚಿಯಲ್ಲಿದ್ದಾರೆ. ಆರಂಭದಲ್ಲಿ ಹಾಟ್ವಾರ್ ಸೆಂಟ್ರಲ್ ಜೈಲಿನಲ್ಲಿ ದಾಖಲಾಗಿದ್ದ ಅವರನ್ನು ವೈದ್ಯಕೀಯ ಆಧಾರದ ಮೇಲೆ ಜಾರ್ಖಂಡ್ ರಾಜಧಾನಿಯ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
'ನಾನು ದೂರವಾಣಿ ಮಾಡಿದಾಗ, ಲಾಲೂ ನೇರವಾಗಿ ಫೋನ್ ಎತ್ತಿಕೊಂಡಿದ್ದಾರೆ. ಜೈಲಿನಿಂದ ಈ ಕೊಳಕು ತಂತ್ರಗಳನ್ನು ಮಾಡಬೇಡಿ, ನೀವು ಯಶಸ್ವಿಯಾಗುವುದಿಲ್ಲ' ಎಂದು ಲಾಲೂ ಅವರಿಗೆ ತಿಳಿಸಿರುವೆ ಅಂತಾ ಮೋದಿ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ 75 ಸ್ಥಾನ ಪಡೆದಿದ್ದರೂ ಮೈತ್ರಿಕೂಟವು 122ರ ಮ್ಯಾಜಿಕ್ ಸಂಖ್ಯೆ ದಾಟಲಿಲ್ಲ. ಈ ಹಿನ್ನೆಲೆ ಸರ್ಕಾರ ರಚಿಸಲು ಮಹಾಘಟಬಂಧನಕ್ಕೆ ಸಾಧ್ಯವಾಗಲಿಲ್ಲ. ಇಬ್ಬರೂ ತಲಾ ನಾಲ್ಕು ಸ್ಥಾನಗಳನ್ನು ಹೊಂದಿದ್ದಾರೆ.
ಈಟಿವಿ ಭಾರತ ಸತ್ಯಶೋಧ :ಇನ್ನು ಇಲ್ಲಿ ನೀಡಿರುವ ದೂರವಾಣಿ ಸಂಖ್ಯೆ ಬಗ್ಗೆ ಈಟಿವಿ ಭಾರತ ಪರಿಶೀಲಿಸಿದಾಗ ಇದು ಅಮಾನ್ಯವಾಗಿದೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲ, ದೂರವಾಣಿ ಸಂಖ್ಯೆಯ ಸ್ಥಳವನ್ನು ಬೆಂಗಳೂರು ಎಂದು ತೋರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸುಶೀಲ್ ಕುಮಾರ್ ಮೋದಿ ಮಾಡಿರುವ ಆರೋಪದ ಮೇಲೆ ಹಾಗೂ ರಾಂಚಿಯ ಹಾಟ್ವಾರ್ ಜೈಲು ಆಡಳಿತ ಸಿಬ್ಬಂದಿ ಮೇಲೆ ಅನುಮಾನಗಳು ಉದ್ಭವಿಸಿದೆ.
ಜೆಡಿಯು ಪ್ರತಿಕ್ರಿಯೆ :ಸುಶೀಲ್ ಮೋದಿ ಅವರ ಆರೋಪದ ಬಳಿಕ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ, ಜೆಡಿಯು ಎಂಎಲ್ಸಿ ನೀರಜ್ ಕುಮಾರ್, ಲಾಲೂ ಯಾದವ್ ಅವರನ್ನು ಹಾಟ್ವಾರ್ ಜೈಲು ಕೋಣೆಯಲ್ಲಿ ಬಂಧಿಸಬೇಕು ಎಂದಿದ್ದಾರೆ. 'ಲಾಲೂ ಯಾದವ್ ಅಪರಾಧಿ. ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಕರೆ ಮಾಡಲು ಅನುಮತಿ ನೀಡಿದ್ದು ಯಾರು? ಇದಕ್ಕಿಂತ ಹೆಚ್ಚಿನ ಪುರಾವೆ ಬೇಕಾಗಿದೆಯೇ? ಇದು ಅಧಿಕಾರದ ದುರ್ಬಳಕೆ' ಎಂದು ಆರೋಪಿಸಿದ್ದಾರೆ.
ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ತೇಜಶ್ವಿ ಯಾದವ್ ಅವರನ್ನು ಒತ್ತಾಯಿಸಿದ ನೀರಜ್, 'ತೇಜಸ್ವಿ ತನ್ನ ತಂದೆಯ ಕೃತ್ಯ ಖಂಡಿಸಬೇಕು. ಲಾಲೂ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ನೀರಜ್ ಹೇಳಿದರು.
ಆರ್‌ಜೆಡಿ ಪ್ರತಿಕ್ರಿಯೆ :ಸುಶೀಲ್ ಕುಮಾರ್ ಮೋದಿಯಂತಹ ಜನರು ಮಾತ್ರ ಸುಳ್ಳು ಹೇಳುತ್ತಾರೆ. ಅವರ ಆರೋಪಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಶಾಸಕ ಭಾಯಿ ವೀರೇಂದ್ರ ಹೇಳಿದ್ದಾರೆ. ಸೋರಿಕೆಯಾದ ಆಡಿಯೋ ಸುಳ್ಳು. ಇಂದಿನ ಸಂದರ್ಭದಲ್ಲಿ ಮಿಮಿಕ್ರಿ ಮತ್ತು ಇಂಟರ್ನೆಟ್ ಬಳಸಿ ಲಾಲೂ ಯಾದವ್ ಅವರಂತೆ ಧ್ವನಿಸುವುದು ಸುಲಭವಾಗಿದೆ. ಆದ್ದರಿಂದ ಆಡಿಯೋ ಏನನ್ನೂ ಸಾಬೀತುಪಡಿಸುವುದಿಲ್ಲ ಎಂದಿದ್ದಾರೆ.