ಪಾಟ್ನಾ: ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಲಾಲು ಪ್ರಸಾದ್ ಯಾದವ್ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಆದರೆ ಇದರಲ್ಲೊಂದು ತಿರುವು ಇದೆ. ಇವರು ಆರ್‌ಜೆಡಿ ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅಲ್ಲ, ಬಿಹಾರದ ಸರನ್ ಜಿಲ್ಲೆಯ ನಿವಾಸಿಯಾಗಿರುವ ಲಾಲು ಪ್ರಸಾದ್ ಯಾದವ್.
ದೆಹಲಿ ತಲುಪಲು ಸಿದ್ಧತೆ: ದೆಹಲಿಗೆ ತೆರಳಲು ಈಗಾಗಲೇ ವಿಮಾನ ಟಿಕೆಟ್ ಬುಕ್ ಮಾಡಿರುವುದಾಗಿ ಲಾಲು ಯಾದವ್ ಹೇಳಿಕೊಂಡಿದ್ದು, ಜೂನ್ 15ರಂದು ನಾಮಪತ್ರ ಸಲ್ಲಿಸಲಿದ್ದಾರೆ. 2017ರಲ್ಲಿ ಕೂಡ ಅವರು ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಆಗಿನ ಬಿಹಾರದ ರಾಜ್ಯಪಾಲ ರಾಮನಾಥ ಕೋವಿಂದ್ ಮತ್ತು ಬಿಹಾರದವರೇ ಆದ ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಮಧ್ಯೆ ಪೈಪೋಟಿ ನಡೆದಿತ್ತು. ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು.
"ಕಳೆದ ಬಾರಿ ನನ್ನ ನಾಮಪತ್ರ ತಿರಸ್ಕೃತವಾಗಿತ್ತು. ನನ್ನ ಉಮೇದುವಾರಿಕೆಯನ್ನು ಬೆಂಬಲಿಸಲು ಸಾಕಷ್ಟು ಸಂಖ್ಯೆಯ ಅನುಮೋದಕರು ಇರಲಿಲ್ಲ. ಆದರೆ ಈ ಬಾರಿ, ನಾನು ಉತ್ತಮ ಸಿದ್ಧತೆ ನಡೆಸಿದ್ದೇನೆ" ಎಂದು ಯಾದವ್ ತಿಳಿಸಿದ್ದಾರೆ.