ಪಾಟ್ನಾ/ನವದೆಹಲಿ:ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಆರೋಗ್ಯದಲ್ಲಿ ಚೇತರಿಸಿಕೆ ಕಂಡು ಬರುತ್ತಿದೆ. ಈ ಬಗ್ಗೆ ಅವರ ಹಿರಿಯ ಪುತ್ರಿ ಮಿಸಾ ಭಾರತಿ ಮಾಹಿತಿ ನೀಡಿದ್ದಾರೆ.
ಮಿಸಾ ಭಾರತಿಯವರು ಆಸ್ಪತ್ರೆಯಲ್ಲಿ ಲಾಲು ಅವರು ಚೇತರಿಸಿಕೊಳ್ಳುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ತನ್ನ ತಂದೆಯ ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಅವರು ಈಗ ಯಾರೊಬ್ಬರ ಬೆಂಬಲದೊಂದಿಗೆ ಕುಳಿತುಕೊಳ್ಳುವಷ್ಟು ಸಾಮರ್ಥ್ಯ ಹೊಂದಿದ್ದಾರೆ. ಚಿಂತಿಸಬೇಡಿ, ಅವರು ಚಿಕಿತ್ಸೆ ಪಡೆಯುತ್ತಿದ್ದು, ಶೀಘ್ರವಾಗಿ ಚೇತರಿಸಿಕೊಳ್ಳಲು ಎಲ್ಲರೂ ಪ್ರಾರ್ಥಿಸಿ ಎಂದು ಟ್ವೀಟ್ನಲ್ಲಿ ಬರೆದಿದ್ದಾರೆ. ಇದೇ ವೇಳೆ, ತಂದೆಯ ಆರೋಗ್ಯದ ಬಗ್ಗೆ ವದಂತಿ ಹರಡದಂತೆ ಮನವಿ ಮಾಡಿಕೊಂಡಿದ್ದಾರೆ.
ಐಸಿಯುನಿಂದ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರ:ಏಮ್ಸ್‌ನಲ್ಲಿರುವ ಲಾಲು ಅವರನ್ನು ಸಂಬಂಧಿಕರನ್ನು ಹೊರತುಪಡಿಸಿ, ಅನೇಕ ರಾಜಕಾರಣಿಗಳು ಭೇಟಿ ಮಾಡಲು ಬಂದಿದ್ದರು. ಆದರೆ ವೈದ್ಯರು ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ವೈದ್ಯರ ಪ್ರಕಾರ, ಬುಧವಾರಕ್ಕೆ ಹೋಲಿಸಿದರೆ ಲಾಲು ಪ್ರಸಾದ್ ಹೆಚ್ಚು ನಿರಾಳರಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಐಸಿಯುನಿಂದ ಜನರಲ್ ವಾರ್ಡ್‌ಗೆ ಕರೆತರುವ ಸಾಧ್ಯತೆ ಇದೆ.