ಲಖಿಂಪುರ್ ಖೇರಿ/ಉತ್ತರಪ್ರದೇಶ:ಲಖಿಂಪುರ್ ಖೇರಿ ಹಿಂಸಾಚಾರದ ತನಿಖೆ ನಡೆಸುತ್ತಿರುವ ಎಸ್‌ಐಟಿ, ಗುರುವಾರ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶೀಶ್ ಮಿಶ್ರಾ ಹಾಗೂ ಇತರ ಮೂವರನ್ನು ಉತ್ತರ ಪ್ರದೇಶದ ಟಿಕೊನಿಯಾ ಗ್ರಾಮದಲ್ಲಿ ನಡೆದ ಘಟನೆಗಳ ಸರಣಿಯನ್ನು ಮರುಸೃಷ್ಟಿಸಲು ಕರೆದೊಯ್ದಿತ್ತು.
ಹಿಂಸಾಚಾರ ನಡೆದ ಜಿಲ್ಲಾ ಕೇಂದ್ರ ಲಖಿಂಪುರ್ ನಗರದಿಂದ ಸುಮಾರು 60 ಕಿಮೀ ದೂರದಲ್ಲಿರುವ ಟಿಕೊನಿಯಾ-ಬನ್ಬೀರ್ ಪುರ್ ರಸ್ತೆಗೆ ಕೇಂದ್ರ ಸಚಿವರ ಮಗ ಸೇರಿ, ಇನ್ನೂ ಮೂವರು ಆರೋಪಿಗಳನ್ನು ಬಿಗಿ ಖಾಕಿ ಭದ್ರತೆಯಲ್ಲಿ ಕರೆದೊಯ್ಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣ: ಆಶಿಶ್ ಮಿಶ್ರಾಗೆ ಜಾಮೀನು ನಿರಾಕರಣೆ, ಮತ್ತಿಬ್ಬರ ಬಂಧನ
ಅಕ್ಟೋಬರ್ 3 ರಂದು ನಡೆದ ಲಖಿಂಪುರ್ ಖೇರಿ ಹಿಂಸಾಚಾರದಲ್ಲಿ ನಾಲ್ವರು ರೈತರು, ಬಿಜೆಪಿ ಕಾರ್ಯಕರ್ತರು ಸೇರಿ 8 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಒಬ್ಬ ಪತ್ರಕರ್ತ ಕೂಡ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಅಕ್ಟೋಬರ್ 9 ರಂದು ಬಂಧಿಸಲ್ಪಟ್ಟ ಆಶಿಶ್ ಮಿಶ್ರಾ ಅವರನ್ನು ಮಂಗಳವಾರದಿಂದ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿತ್ತು.
ಮಂಗಳವಾರ ಬಂಧಿತ ಶೇಖರ್ ಭಾರತಿಯನ್ನು ನ್ಯಾಯಾಲಯವು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆಶೀಶ್ ಮಿಶ್ರಾ, ಲುವಕುಶ್, ಆಶೀಶ್ ಪಾಂಡೆ, ಭಾರತಿ, ಅಂಕಿತ್ ಮತ್ತು ಕಾಳೆ ಎಂಬ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಆಶೀಶ್ ಮಿಶ್ರಾ ಅವರ ಆಪ್ತ ಸ್ನೇಹಿತರೆಂದು ಹೇಳಲಾಗುವ ಅಂಕಿತ್ ದಾಸ್ ಮತ್ತು ಕಾಳೆ, ಲಖಿಂಪುರ್‌ನ ಕ್ರೈಂ ಬ್ರಾಂಚ್ ಕಚೇರಿಯಲ್ಲಿ ಎಸ್‌ಐಟಿ ಮುಂದೆ ನಿನ್ನೆ ಹಾಜರಾಗಿದ್ದರು.