ನವದೆಹಲಿ:ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಆಶಿಶ್ ಮಿಶ್ರಾ ಅವರಿಗೆ ಸುಪ್ರೀಂಕೋರ್ಟ್ ಬುಧವಾರ ಎಂಟು ವಾರಗಳ ಮಧ್ಯಂತರ ಜಾಮೀನು ನೀಡಿದೆ. ಜಾಮೀನು ಅವಧಿಯಲ್ಲಿ ಉತ್ತರ ಪ್ರದೇಶ ಮತ್ತು ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಟಿ) ಇರಕೂಡದು ಎಂಬ ಷರತ್ತುಗಳನ್ನು ಸುಪ್ರೀಂಕೋರ್ಟ್ ವಿಧಿಸಿದೆ. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ ಕೆ ಮಹೇಶ್ವರಿ ಅವರ ಪೀಠವು ಮಿಶ್ರಾಗೆ ಜಾಮೀನು ನೀಡಿದ್ದು, ಜೈಲಿನಿಂದ ಬಿಡುಗಡೆಯಾದ ಒಂದು ವಾರದೊಳಗೆ ಉತ್ತರ ಪ್ರದೇಶವನ್ನು ತೊರೆಯುವುದು ಸೇರಿದಂತೆ ಇನ್ನೂ ಹಲವಾರು ಷರತ್ತುಗಳನ್ನು ವಿಧಿಸಿದೆ.
ಹಲವು ಷರತ್ತುಗಳನ್ನು ವಿಧಿಸಿದ ಕೋರ್ಟ್:ಮಿಶ್ರಾ ತಾವಿರುವ ಸ್ಥಳ ಬಗ್ಗೆ ಸಂಬಂಧಪಟ್ಟ ನ್ಯಾಯಾಲಯಕ್ಕೆ ತಿಳಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಮಿಶ್ರಾ ಅಥವಾ ಅವರ ಕುಟುಂಬದವರು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಮತ್ತು ವಿಚಾರಣೆಯನ್ನು ವಿಳಂಬಗೊಳಿಸಲು ಪ್ರಯತ್ನಿಸಿದರೆ ಅವರ ಜಾಮೀನು ರದ್ದುಗೊಳಿಸಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಮಿಶ್ರಾ ತಾವಿರುವ ಸ್ಥಳದ ವ್ಯಾಪ್ತಿಯಲ್ಲಿನ ಪೊಲೀಸ್ ಠಾಣೆಯಲ್ಲಿ ತಮ್ಮ ಹಾಜರಾತಿ ಹಾಕುವಂತೆ ಕೂಡ ನ್ಯಾಯಾಲಯವು ಸೂಚಿಸಿದೆ.
ಜಾಮೀನು ನಿರಾಕರಿಸಿದ್ದ ಹೈಕೋರ್ಟ್:ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 26, 2022 ರಂದು ಆಶಿಶ್ ಮಿಶ್ರಾಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠವು ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರನಾಗಿರುವ ಆಶಿಶ್ ಮಿಶ್ರಾ, ಅಕ್ಟೋಬರ್ 3, 2021 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹಾಯಿಸಿ ರೈತರು ಸೇರಿದಂತೆ ಎಂಟು ಜನರನ್ನು ಕೊಂದ ಆರೋಪ ಹೊತ್ತಿದ್ದಾರೆ.