ಲಖೀಂಪುರ (ಉತ್ತರ ಪ್ರದೇಶ): ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಹಾಗೂ ಇತರರಿಂದ ವಶಪಡಿಸಿಕೊಂಡಿರುವ ಗನ್‌ನಿಂದ ಫೈರಿಂಗ್ ಆಗಿದೆ ಎಂದು ಎಫ್‌ಎಸ್‌ಎಲ್ ವರದಿ ದೃಢಪಡಿಸಿದೆ.
ಆಶಿಶ್ ಮಿಶ್ರಾ ಗುಂಡು ಹಾರಿಸಿದ್ದಾರೆ ಎಂದು ಪ್ರತಿಭಟನಾನಿರತ ರೈತರು ಆರೋಪಿಸಿದ್ದರು. ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವರದಿಯು ಶಸ್ತ್ರಾಸ್ತ್ರಗಳಿಂದ ಫೈರಿಂಗ್ ಆಗಿದೆ ಎಂಬುದನ್ನು ದೃಢಪಡಿಸಿದ್ದು, ಹಿಂಸಾಚಾರದ ದಿನ ಅಥವಾ ಬೇರೆ ದಿನಗಳಲ್ಲಿ ಗುಂಡು ಹಾರಿಸಲಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸಿಲ್ಲ.
ಲಖಿಂಪುರ ಹಿಂಸಾಚಾರದ ನಂತರ ಆಶಿಶ್ ಮಿಶ್ರಾ ಅಲಿಯಾಸ್ ಮೋನು ಮಿಶ್ರಾಗೆ ಸೇರಿದ ರೈಫಲ್ ಸೇರಿದಂತೆ ನಾಲ್ಕು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಮಾಜಿ ಕೇಂದ್ರ ಸಚಿವ ಅಖಿಲೇಶ್ ದಾಸ್ ಅವರ ಸೋದರಳಿಯ ಅಂಕಿತ್ ದಾಸ್ ಒಡೆತನದ ಪಿಸ್ತೂಲ್ ಮತ್ತು ದಾಸ್ ಅವರ ಅಂಗರಕ್ಷಕ ಲತೀಫ್ ಕಾಳೆ ಬಳಿಯಿದ್ದ ರಿಪೀಟರ್ ಗನ್ ಕೂಡ ಇದರಲ್ಲಿ ಸೇರಿವೆ.
ದಾಸ್ ಅವರ ಸಹಾಯಕ ಸತ್ಯ ಪ್ರಕಾಶ್ ಮಾಲೀಕತ್ವದ ರಿವಾಲ್ವರ್ ನಾಲ್ಕನೇ ಆಯುಧದ ಫೊರೆನ್ಸಿಕ್ ವರದಿಗಾಗಿ ಕಾಯಲಾಗುತ್ತಿದೆ. ಎಫ್‌ಎಸ್‌ಎಲ್‌ಗೆ ಬ್ಯಾಲಿಸ್ಟಿಕ್ ಪರೀಕ್ಷೆಗೆ ಕಳುಹಿಸಲಾದ ನಾಲ್ಕು ಶಸ್ತ್ರಾಸ್ತ್ರಗಳಲ್ಲಿ, ಆಶಿಶ್ ಮಿಶ್ರಾ ಅವರ ರೈಫಲ್ ಸೇರಿದಂತೆ ಮೂರರಿಂದ ಗುಂಡಿನ ದಾಳಿ ನಡೆದಿದೆ ಎಂದು ದೃಢಪಟ್ಟಿದೆ. ಆದರೆ, ಯಾವಾಗ ಗುಂಡಿನ ದಾಳಿ ನಡೆದಿದೆ ಎಂಬುದನ್ನು ವರದಿಯು ಖಚಿತಪಡಿಸಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.