ಲಕ್ನೋ:ಲಖೀಮ್ಪುರ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಆಶಿಶ್ ಮಿಶ್ರಾರನ್ನು ಉತ್ತರ ಪ್ರದೇಶದ ಎಸ್ಐಟಿ ತಂಡ ಬಂಧಿಸಿದೆ. 12 ಗಂಟೆಗಳ ದೀರ್ಘ ವಿಚಾರಣೆ ಬಳಿಕ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರನನ್ನು ಬಂಧಿಸಲಾಗಿದೆ.
ವಿಚಾರಣೆ ವೇಳೆ ಆಶಿಸ್ ಮಿಶ್ರಾ ಸರಿಯಾಗಿ ಉತ್ತರಿಸಿಲ್ಲ ಮತ್ತು ಸಹಕರಿಸಿಲ್ಲ. ಈ ಹಿನ್ನೆಲೆ ಬಂಧಿಸಿದ್ದೇವೆ. ಕೋರ್ಟ್ ಮುಂದೆ ಹಾಜರು ಪಡಿಸಲಿದ್ದೇವೆ ಎಂದು ಡಿಐಜಿ ಉಪೇಂದ್ರ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಅಪರಾಧ ವಿಭಾಗ ವಿಶೇಷ ತನಿಖಾ ತಂಡದ ಮುಂದೆ ಇಂದು ಬೆಳಗ್ಗೆ ಆಶಿಶ್ ಮಿಶ್ರಾ ಹಾಜರಾಗಿದ್ದರು. ಇನ್ನು ವಿಚಾರಣೆಯ ವಿಡಿಯೋ ಸೆರೆ ಹಿಡಿಯಲಾಗಿದೆ ಎಂದು ತಿಳಿದುಬಂದಿದೆ.
ನ್ಯಾಯಾಲಯ ಮುಂದೆ ಹಾಜರ್:
ಆಶಿಶ್ ಮಿಶ್ರಾನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಸದ್ಯಕ್ಕೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಕಾರಾಗೃಹದಲ್ಲಿ ಆಶಿಶ್ ಮಿಶ್ರಾನನ್ನು ಇರಿಸಲಾಗಿದೆ.
ಅಕ್ಟೋಬರ್ 11 ರಂದು ವಿಚಾರಣೆ ಇರಲಿದ್ದು, ಪೊಲೀಸ್ ಕಸ್ಟಡಿಗೆ ವಹಿಸುತ್ತಾರೋ ಇಲ್ಲವೋ ಕಾದು ನೋಡಬೇಕಿದೆ. ಆದ್ರೆ ಪೊಲೀಸರು 3 ದಿನದ ಮಟ್ಟಿಗೆ ಆರೋಪಿಯನ್ನು ನಮ್ಮ ವಶಕ್ಕೆ ನೀಡುವಂತೆ ಕೇಳಿಕೊಂಡಿದ್ದಾರೆ. ಸದ್ಯದ ಮಟ್ಟಿಗೆ ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಆರೋಪಿಯ ಪರ ವಕೀಲ ಅವ್ದೇಶ್ ಕುಮಾರ್ ತಿಳಿಸಿದ್ದಾರೆ.
ಅಕ್ಟೋಬರ್ 3 ರಂದು ಲಖೀಮ್ಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ 8 ಜನ ಮೃತಪಟ್ಟಿದ್ದರು. ಈ ವೇಳೆ ಕೇಂದ್ರ ಸಚಿವರ ಪುತ್ರ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿಸಿದ್ದರಿಂದ ನಾಲ್ವರು ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಘಟನೆಯ ಬಳಿಕ ಹಿಂಸಾಚಾರ ಉಂಟಾಗಿತ್ತು. ಇದು ದೇಶಾದ್ಯಂತ ಸಂಚಲನ ಮೂಡಿಸಿ, ಆರೋಪಿಗಳ ಬಂಧನಕ್ಕೆ ವಿರೋಧ ಪಕ್ಷಗಳು ಹಾಗೂ ರೈತ ಸಂಘಟನೆಗಳು ಪಟ್ಟು ಹಿಡಿದು ಪ್ರತಿಭಟನೆ ಕೈಗೊಂಡಿದ್ದವು.
(ಲಖಿಂಪುರ ಹಿಂಸಾಚಾರ: ಮೃತ ಬಿಜೆಪಿ ಕಾರ್ಯಕರ್ತರು, ಕಾರು ಚಾಲಕನಿಗೆ 45 ಲಕ್ಷ ರೂ. ಪರಿಹಾರ)