ಲಖಿಂಪುರ (ಉತ್ತರ ಪ್ರದೇಶ): ಸರ್ಕಾರ ನಿರ್ಮಿಸಿದ ಶೌಚಾಲಯದ ಮೇಲ್ಛಾವಣಿ ಮತ್ತು ಗೋಡೆ ಕುಸಿದು ಐದು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದಿದೆ. ಪಂಕಜ್ (5) ಮೃತ ಬಾಲಕನ ಹೆಸರು. ಕಳೆದ ಶನಿವಾರ ತನ್ನ ಸ್ನೇಹಿತರೊಂದಿಗೆ ಶೌಚಾಲಯದ ಬಳಿ ಆಟವಾಡುತ್ತಿರುವಾಗ ಈ ಘಟನೆ ಜರುಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
2016ರಲ್ಲಿ ಲಾಲ್ತ ಎಂಬುವರ ಮನೆಯ ಹೊರಗೆ ಸರ್ಕಾರದಿಂದ ಶೌಚಾಲಯ ನಿರ್ಮಿಸಲಾಗಿತ್ತು. ಶನಿವಾರ ಲಲ್ತಾ ಅವರ ಪುತ್ರ ಪಂಕಜ್ (5) ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಏಕಾಏಕಿ ಶೌಚಾಲಯದ ಮೇಲ್ಛಾವಣಿ ಮತ್ತು ಗೋಡೆ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಘಟನೆ ಬಳಿಕ ಮಗುವಿನ ತಂದೆ ಪೊಲೀಸರಿಗೆ ದೂರು ನೀಡಿದರು ಎಂದು ಸ್ಥಳೀಯ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ದೀಪಕ್ ರೈ ತಿಳಿಸಿದರು.
ಕಳಪೆ ಕಾಮಗಾರಿ: ಆಗಿನ ಗ್ರಾಮ ಪಂಚಾಯಿತಿ ಸದಸ್ಯ ಗುತ್ತಿಗೆದಾರರೊಂದಿಗೆ ಕೈ ಜೋಡಿಸಿ ಕಳಪೆ ಕಾಮಗಾರಿ ಮತ್ತು ಗುಣಮಟ್ಟವಿಲ್ಲದ ಕಟ್ಟಡ ಸಾಮಗ್ರಿಗಳನ್ನು ಬಳಸಿ ಶೌಚಾಲಯವನ್ನು ನಿರ್ಮಿಸಿದ್ದಾರೆ ಎಂದು ಮೃತ ಮಗುವಿನ ಕುಟಂಬಸ್ಥರು ಆರೋಪಿಸಿದ್ದಾರೆ. ಆರೋಪವನ್ನು ತಳ್ಳಿಹಾಕಿರುವ ಗ್ರಾಮ ಪಂಚಾಯಿತಿ ಸದಸ್ಯ ಶ್ರವಣ ಯಾದವ್, ಶೌಚಾಲಯದ ಬಳಿ ಎರಡು ಪ್ರಾಣಿಗಳು ಜಗಳವಾಡುತ್ತಿದ್ದಾಗ ಡಿಕ್ಕಿ ಹೊಡೆದ ಪರಿಣಾಮ ಶೌಚಾಲಯ ಕುಸಿದು ಬಿದ್ದು ಈ ಘಟನೆ ನಡೆದಿದೆ. ಕಳೆಪೆ ಕಾಮಗಾರಿಯಿಂದ ಅಲ್ಲ ಎಂದು ಹೇಳಿದ್ದಾರೆ.