ಜಲಂಧರ್: ಪಂಜಾಬ್ನ ಜಲಂಧರ್ ಜಿಲ್ಲೆಯಲ್ಲಿ ಕಳೆದ 40 ಗಂಟೆಗಳಿಗೂ ಹೆಚ್ಚು ಕಾಲ 60-70 ಅಡಿ ಆಳದ ಬೋರ್ವೆಲ್ ಒಳಗೆ ಸಿಲುಕಿಕೊಂಡಿರುವ 55 ವರ್ಷದ ಕಾರ್ಮಿಕನನ್ನು ರಕ್ಷಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ದೆಹಲಿ- ಕತ್ರಾ ಎಕ್ಸ್ಪ್ರೆಸ್ವೇ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ಕರ್ತಾರ್ಪು- ಕಪುರ್ತಲಾ ರಸ್ತೆಯ ಬಸ್ರಾಮ್ಪುರ ಗ್ರಾಮ ಬಳಿ ಶನಿವಾರ ಸಂಜೆ ಕಾರ್ಮಿಕ ಸುರೇಶ್ ಎಂಬಾತ ಬೋರ್ವೆಲ್ ಒಳಗೆ ಸಿಲುಕೊಂಡಿದ್ದಾನೆ.
ಸುರೇಶ್ ಹಾಗೂ ಮತ್ತೊಬ್ಬ ಕಾರ್ಮಿಕ ಪವನ್ ಎಂಬಾತ ಕೊರೆಯುವ ಯಂತ್ರದ ಕೆಲ ಭಾಗಗಳನ್ನು ಬಿಡಿಸಲು ಬೋರ್ವೆಲ್ ಒಳಗೆ ಇಳಿದಿದ್ದರು. ಆದರೆ ಕೆಲಸ ಮುಗಿಸಿ ಪವನ್ ಮೇಲಕ್ಕೆ ಬಂದಿದ್ದು, ಸುರೇಶ್ ಮೇಲೆ ಮಣ್ಣು ಕುಸಿದ ಕಾರಣ ಹೊರಗೆ ಬರಲಾಗದೆ ಬೋರ್ವೆಲ್ ಒಳಗೆ ಸಿಕ್ಕಿಬಿದ್ದಿದ್ದಾನೆ. ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳಿಂದ ಸುರೇಶ್ ರಕ್ಷಣಾ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ದೆಹಲಿ- ಕತ್ರಾ ಎಕ್ಸ್ಪ್ರೆಸ್ ವೇ ಯೋಜನೆಯ ಕಾಮಗಾರಿ ಭಾಗವಾಗಿ ಪಿಲ್ಲರ್ ನಿರ್ಮಿಸಲು ಈ ಬೋರ್ವೆಲ್ ಅಗೆಯಲಾಗಿದೆ.
ಶನಿವಾರದಿಂದ ಬೋರ್ವೆಲ್ ಒಳಗೆ ಸಿಲುಕಿರುವ ಸುರೇಶ್:ಪ್ರಸ್ತುತ ಬೋರ್ವೆಲ್ ಒಳಗೆ ಸಿಲುಕಿಕೊಂಡಿರುವ ವ್ಯಕ್ತಿ ಹರಿಯಾಣದ ಜಿಂದ್ ನಿವಾಸಿ. ಶನಿವಾರ ಸಂಜೆ 7 ಗಂಟೆಯಿಂದ ಬೋರ್ವೆಲ್ ಒಳಗೆ ಸಿಲುಕಿಕೊಂಡಿರುವ ಸುರೇಶ್ನನ್ನು ಹೊರತೆಗೆಯಲು ಎನ್ಡಿಆರ್ಎಫ್ ತಂಡ ನಿರಂತರವಾಗಿ ಕೆಲಸ ಮಾಡುತ್ತಿದ್ದರೂ, ರಕ್ಷಣೆ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಬೋರ್ವೆಲ್ ಸಮೀಪದಲ್ಲೇ ನೀರು ತುಂಬಿದ ಕೊಳ ನಿರ್ಮಾಣವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.