ಧನ್‌ಬಾದ್ (ಜಾರ್ಖಂಡ್):ಇಲ್ಲಿನ ಪಂಚೇಟ್ ಅಣೆಕಟ್ಟನ್ನು ಉದ್ಘಾಟಿಸಿದ್ದ, ಮಾಜಿ ಪ್ರಧಾನಿ ಜವಾಹರ್ಲಾಲ್ ನೆಹರೂ ಅವರ ಪತ್ನಿ ಎಂದೇ ಹಣೆಪಟ್ಟಿ ಕಟ್ಟಿಕೊಂಡು ಶಿಕ್ಷೆಗೆ ಗುರಿಯಾಗಿದ್ದ ಬುಡಕಟ್ಟು ಸಮುದಾಯದ ಬುಧ್ನಿ ಮಾಂಜಿಯಾನ್ ಅವರು ಅನಾರೋಗ್ಯದಿಂದ ಶುಕ್ರವಾರ ರಾತ್ರಿ ನಿಧನರಾದರು. ಸಿಐಎಸ್ಎಫ್ ಯೋಧರು ಅವರ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಪಾರ್ಥಿವ ಶರೀರದ ಮೆರವಣಿಗೆ ನಡೆಸಿ, ಪಂಚೇಟ್ ಘಾಟ್ನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಬುಡಕಟ್ಟು ಸಮುದಾಯದ ಬುಧ್ನಿ ಅವರು ಮಾಡದ ತಪ್ಪಿಗೆ 60 ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿದ್ದರು. ಬಹು ದಿನಗಳಿಂದ ಅನಾರೋಗ್ಯಕ್ಕೀಡಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜಾರ್ಖಂಡ್ನ ನಿರ್ಸಾದ ಪಂಚೇಟ್ ಹಿಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರು ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಮಾಂಜಿಯಾನ್ ನೆಹರೂ ಪತ್ನಿಯೇ?:ಪಶ್ಚಿಮಬಂಗಾಳದ ಮೂಲದ ಬುಧ್ನಿ ಮಾಂಜಿಯಾನ್ ಅವರು 17 ವರ್ಷದವರಾಗಿದ್ದಾಗ, ಮಾಜಿ ಪ್ರಧಾನಿ ದಿವಂಗತ ಜವಾಹರ್ಲಾಲ್ ನೆಹರೂ ಅವರ ಕೋರಿಕೆಯ ಮೇರೆಗೆ ಪಂಟೇಲ್ ಅಣೆಕಟ್ಟನ್ನು ಉದ್ಘಾಟಿಸಿದ್ದರು. ಈ ವೇಳೆ ನೆಹರೂ ಅವರು ಆಕೆಯ ಕೊರಳಿಗೆ ಹೂವಿನ ಹಾರ ಹಾಕಿ ಸನ್ಮಾನಿಸಿದ್ದರು. ಇದು ಅವರ ಬಾಳಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಆದಿವಾಸಿಗಳ ಸಂಪ್ರದಾಯದಲ್ಲಿ ಕೊರಳಿಗೆ ಹಾರ ಹಾಕಿಸಿಕೊಂಡಲ್ಲಿ ಅವರ ಪತ್ನಿಯಾಗುತ್ತಾರೆ.