ಪ್ರೀತಿ-ಮಮತೆ ಎಲ್ಲ ಗಡಿಗಳನ್ನೂ ಮೀರಿದ್ದು ಎನ್ನುವುದನ್ನು ಕೇಳಿದ್ದೇವೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ನಾಯಿಯ ಈ ವಿಡಿಯೋ ಇದಕ್ಕೆ ನೂರಕ್ಕೆ ನೂರರಷ್ಟು ನಿದರ್ಶನವಾಗಲ್ಲದು. ಬಹುಶಃ ನಾಯಿಯ ಕುರಿತಂತೆ ಕೇಳಿರುವಷ್ಟು ಕಥೆಗಳನ್ನು ಬೇರಾವ ಸಾಕು ಪ್ರಾಣಿಗಳ ಬಗೆಗೂ ಯಾರೂ ಕೇಳಿರಲಾರರು.
ಒಡತಿಯ ಮಗುವನ್ನು ಹಾವಿನಿಂದ ಪಾರು ಮಾಡಿದ ನಾಯಿ ಮರಿ, ಒಡೆಯನನ್ನು ಸಾವಿನಲ್ಲೂ ಹಿಂಬಾಲಿಸಿದ ಸಾಕು ನಾಯಿ, ಮನೆಯ ಮಾಲೀಕನನ್ನು ಅರಸುತ್ತಾ ನೂರಾರು ಕಿ.ಮೀ. ಅಲೆದಾಡಿದ ಶ್ವಾನ... ಹೀಗೆ ಆಗಾಗ ಈ ಪ್ರಾಣಿಯ ಕುರಿತ ಸುದ್ದಿಗಳು ಕಿವಿಗೆ ಬೀಳುತ್ತಲೇ ಇರುತ್ತವೆ. ಇದೀಗ ತಾಯಿಯಿಂದ ಬೇರ್ಪಟ್ಟಿರುವ ಮೂರು ಹುಲಿ ಮರಿಗಳನ್ನು ಲ್ಯಾಬ್ರಡಾರ್ ನಾಯಿಯೊಂದು ಪ್ರೀತಿಯಿಂದ ಸಲಹುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಚೀನಾದಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ. ಹುಲಿ ಮರಿಗಳು ಮತ್ತು ಸಾಕು ತಾಯಿಯ ನಡುವಿನ ಬಾಂಧವ್ಯ ನೋಡುಗರನ್ನು ಬೆರಗುಗೊಳಿಸಿದೆ. ಹುಲಿ ಮರಿಗಳು ನಾಯಿಯ ಸುತ್ತ ಆಟವಾಡುತ್ತಿರುವ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ. ಹೆಣ್ಣು ಹುಲಿ ತನ್ನ ಮರಿಗಳನ್ನು ತ್ಯಜಿಸುವುದು ಕೇಳರಿಯದ ಸಂಗತಿಯೇನಲ್ಲ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್‌ಟಿಎಸಿ) ಎಲ್ಲಾ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಅದರ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಕಿರುಪುಸ್ತಕದಲ್ಲಿ ಪಟ್ಟಿ ಮಾಡಿರುವಂತೆ ಹಲವು ಕಾರಣಗಳಿವೆ. ತಾಯಿ ಹುಲಿಯು ಮರಿಗಳು ದುರ್ಬಲವಾಗಿದ್ದರೆ, ಅಸಮರ್ಥವಾಗಿದ್ದರೆ, ಗಾಯಗೊಂಡರೆ ಅಥವಾ ಅನಾರೋಗ್ಯದಿಂದ ಕೂಡಿದ್ದರೆ ಅವುಗಳನ್ನು ತ್ಯಜಿಸುತ್ತದೆಯಂತೆ.
ಕೆಲವು ಹೆಣ್ಣು ಹುಲಿಗಳು ಗಾಯಗೊಂಡಾಗ ಆಹಾರ ನೀಡಲು ಸಾಧ್ಯವಾಗದೆ ತಮ್ಮ ಮರಿಗಳನ್ನು ತ್ಯಜಿಸುತ್ತವೆ ಅಂತಾರೆ. ಇಲ್ಲಿಯೂ ಹಾಗೆಯೇ ಆಗಿದೆ. ಈ ಮರಿಗಳು ಜನಿಸಿದ ಕೂಡಲೇ ತಾಯಿ ಅವುಗಳಿಗೆ ಆಹಾರವನ್ನು ನೀಡಲು ನಿರಾಕರಿಸಿದೆ ಹಾಗೂ ಅವುಗಳನ್ನು ತ್ಯಜಿಸಿದೆ ಎಂದು ಹೇಳಲಾಗಿದೆ. ಆದರೆ ಲ್ಯಾಬ್ರಡಾರ್ ನಾಯಿ ಈ ತಬ್ಬಲಿ ಹುಲಿ ಮರಿಗಳನ್ನು ತಾಯಿಗಿಂತ ಮಿಗಿಲಾಗಿ ನೋಡಿಕೊಳ್ಳುತ್ತಿದೆ. ಭಾನುವಾರದಂದು 'ಎ ಪೀಸ್ ಆಫ್ ನೇಚರ್' ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೊ 1.12 ಲಕ್ಷ ಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.
ಇದನ್ನೂ ಓದಿ:ಅಪರೂಪದ ಬಾಂಧವ್ಯ: ಹಸುವಿನ ಕರುವಿಗೆ ಹಾಲುಣಿಸುತ್ತಿರುವ ಶ್ವಾನ