ಕರ್ನಾಟಕ

karnataka

ETV Bharat / bharat

Kurup Movie: ಕ್ರಿಮಿನಲ್​ಗಳಲ್ಲೇ ಕ್ರಿಮಿನಲ್​ನ ಸ್ಟೋರಿ ಇದು: ಚಿತ್ರದ ಕತೆಯ ಹಿಂದಿನ ಕತೆಯೇ ರೋಚಕ! - ಅಲ್ಪೇಶ್​​ ಚಾಕೋ ಹತ್ಯೆ

ಕುಖ್ಯಾತನೋರ್ವನ ಜೀವನ ಚರಿತ್ರೆ ಆಧರಿಸಿದ ಸಿನಿಮಾವೊಂದು ಮಾಲಿವುಡ್​ನಲ್ಲಿ ಓಡಾಡುತ್ತಿದೆ. ಈ ಸಿನಿಮಾದ ಹಿಂದಿನ ಕತೆ ತೀರಾ ರೋಚಕವಾಗಿದ್ದು, ಅದರ ವಿವರಣೆ ಇಲ್ಲಿದೆ. ಸುಕುಮಾರ್ ಕುರುಪ್​ ಜೀವನ ಚರಿತ್ರೆಯ ಕುರುಪ ಚಿತ್ರ(Kurup Movie) ಸದ್ದು ಮಾಡ್ತಿದೆ.

Kurup movie brings back the story of an ever-elusive fugitive and the sensational Chacko murder case
Kurup Movie: ಕ್ರಿಮಿನಲ್​ಗಳಲ್ಲೇ ಕ್ರಿಮಿನಲ್​ನ ಸ್ಟೋರಿ ಇದು: ಚಿತ್ರದ ಕತೆಯ ಹಿಂದಿನ ಕತೆ ಏನು ಗೊತ್ತಾ?

By

Published : Nov 13, 2021, 7:42 PM IST

ಇತ್ತೀಚೆಗೆ ಭಾರತೀಯ ಚಿತ್ರರಂಗದಲ್ಲಿ ಭಿನ್ನ ವಿಭಿನ್ನವಾದ ಚಿತ್ರಗಳು ತೆರೆಗೆ ಅಪ್ಪಳಿಸುತ್ತಿವೆ. ಕೆಲವೊಂದು ಸಿನಿಮಾಗಳು ವಿಭಿನ್ನ ಚಿತ್ರಕಥೆ ಹೊಂದಿದ್ದರೆ, ಇನ್ನೂ ಕೆಲವು ಸಿನಿಮಾಗಳು ಖ್ಯಾತ ಅಥವಾ ಕುಖ್ಯಾತ ವ್ಯಕ್ತಿಯ ನಿಜ ಜೀವನವನ್ನು ಆಧರಿಸಿರುತ್ತವೆ. ಮಾಲಿವುಡ್​ನಲ್ಲಿ (Mollywood) ಕ್ರಿಮಿನಲ್​ ಓರ್ವನ ಜೀವನಾಧಾರಿತ ಸಿನಿಮಾವೊಂದು ತೆರೆಗೆ ಅಪ್ಪಳಿಸಿದೆ.

ಮಲಯಾಳಂನ ಬಿಗ್ ಬಜೆಟ್​​ನ ಚಿತ್ರಗಳಲ್ಲಿ ಒಂದಾಗಿರುವ, ದುಲ್ಕರ್ ಸಲ್ಮಾನ್ ತಾರಾಗಣದಲ್ಲಿರುವ 'ಕುರುಪ್' ಚಿತ್ರ (Kurup Movie) ಸುಮಾರು ಒಂದೂವರೆ ಸಾವಿರ ಚಿತ್ರಮಂದಿರಗಳಲ್ಲಿ ತೆರೆಗೆ ಅಪ್ಪಳಿಸಿದ್ದು, ಕೇರಳದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದ, ಸುಕುಮಾರ್ ಕುರುಪ್​ ಜೀವನ ಚರಿತ್ರೆಯನ್ನು ಅನಾವರಣಗೊಳಿಸಲಾಗಿದೆ.

ದುಲ್ಕರ್ ಸಲ್ಮಾನ್ (Dulquer Salmaan) ಈ ಸಿನಿಮಾಗೆ ಹಣ ಹಾಕಿದ್ದು, ಶ್ರೀನಾಥ್ ರಾಜೇಂದ್ರನ್ (Srinath Rajendran) ನಿರ್ದೇಶನದಲ್ಲಿ ಮೂಡಿಬಂದಿರುವ ಕುರುಪ್ ಸಿನಿಮಾ 80ರ ದಶಕದಿಂದ 90ರ ದಶಕದೊಳಗಿನ ಚಾಕೋ ಮರ್ಡರ್ ಕೇಸ್ ಅನ್ನು ಈ ಸಿನಿಮಾ ಕಟ್ಟಿಕೊಟ್ಟಿದೆ.

ಏನಿದು ಚಾಕೋ ಮರ್ಡರ್ ಕೇಸ್? (Chacko Murder case)

ಅದು 1984ರ ಜನವರಿ ತಿಂಗಳ 22ನೇ ತಾರೀಕು.. ಮುಂಜಾನೆಯ ಮಂಜು ಎಲ್ಲರನ್ನೂ ನಡುಗಿಸುವ ವೇಳೆ ಕೇರಳದ ಮಾವೇಲಿಕ್ಕಾರ-ಚೆಂಗನ್ನೂರು ರಸ್ತೆಯಲ್ಲಿರುವ ಕುನ್ನಂ ಎಂಬಲ್ಲಿರುವ ಕೊಲ್ಲಡವು ಸೇತುವೆ ಬಳಿ ಕಾರೊಂದು ಹೊತ್ತಿ ಉರಿಯುತ್ತಿತ್ತು. ಡ್ರೈವಿಂಗ್ ಸೀಟಿನಲ್ಲಿದ್ದ ವ್ಯಕ್ತಿ ಅಕ್ಷರಶಃ ಬೆಂಕಿಯಲ್ಲಿ ದಹಿಸುತ್ತಿದ್ದ. ದಾರಿಯಲ್ಲಿ ಹೋಗುತ್ತಿದ್ದ ಪ್ರಯಾಣಿಕರ ಕಾರೊಂದು ಅದನ್ನು ಗಮನಿಸಿ ಸ್ಥಳೀಯರಿಗೆ ಮಾಹಿತಿ ನೀಡಿತ್ತು. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

KLQ 7831 ನೋಂದಣಿಯ ಅಂಬಾಸಿಡರ್ ಕಾರು ಅದು. ಚೆರಿಯನಾಡು ಮೂಲದ ಸುಕುಮಾರ ಕುರುಪ್ (Sukumar kurup) ಎಂಬಾತನಿಗೆ ಆ ಕಾರು ಸೇರಿದ್ದು ಎಂಬುದು ಪ್ರಾಥಮಿಕ ತನಿಖೆ ಮೂಲಕ ಗೊತ್ತಾಗಿತ್ತು. ಘಟನಾ ಸ್ಥಳದಿಂದ ಒಂದು ಬೆಂಕಿ ಪೊಟ್ಟಣ, ವಾಚ್​​, ಚಪ್ಪಲಿಗಳು, ರಬ್ಬರ್​ನ ಕೈಗವಸುಗಳನ್ನು ಪೊಲೀಸರು ಜಪ್ತಿ ಮಾಡಿದ್ದರು.

ಭತ್ತದ ಗದ್ದೆಯಲ್ಲಿ ಹೆಜ್ಜೆ ಗುರುತು :ಶವವನ್ನು ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗದ ಕಾರಣ ಮತ್ತು ಗುರುತಿಸಲಾಗದಷ್ಟು ಸುಟ್ಟು ಹೋಗಿದ್ದರಿಂದ ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಈ ವರದಿ ಮತ್ತಷ್ಟು ಅಚ್ಚರಿಯನ್ನು ಅಲ್ಲಿನ ತಜ್ಞರಲ್ಲಿ ಮೂಡಿಸಿತ್ತು. ಮೃತ ವ್ಯಕ್ತಿ ಕೈಗಡಿಯಾರ, ಉಂಗುರ, ಚಪ್ಪಲಿಯನ್ನು ಈ ಹಿಂದೆ ಧರಿಸಿದ್ದ ಎಂಬುದಕ್ಕೆ ಯಾವುದೇ ಆಧಾರಗಳಿರಲಿಲ್ಲ. ಅಲ್ಲಿ ಅನುಮಾನ ಮೂಡಿಸಿದ್ದು, ಪಕ್ಕದ ಭತ್ತದ ಗದ್ದೆಯಲ್ಲಿ ವ್ಯಕ್ತಿಯೋರ್ವ ಓಡಿ ಹೋಗಿದ್ದ ಕಾಲಿನ ಗುರುತುಗಳು. ಯಾರೋ ಒಬ್ಬ ವ್ಯಕ್ತಿ ಭಯಭೀತನಾಗಿ ಭತ್ತದ ಗದ್ದೆಯಲ್ಲಿ ಓಡಿರುವುದು ಗೊತ್ತಾಗಿತ್ತು.

ಮೃತಪಟ್ಟಿರುವ ವ್ಯಕ್ತಿಯನ್ನು ಕತ್ತು ಹಿಸುಕಿ ಮೊದಲೇ ಕೊಲೆ ಮಾಡಿ, ಕಾರಿಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿ ಬಂದಿತ್ತು. ಅದರ ಜೊತೆಗೆ ದೇಹದಲ್ಲಿ ಆಲ್ಕೋಹಾಲ್ ಪ್ರಮಾಣವೂ ಇತ್ತು. ದೇಹ ಸಂಪೂರ್ಣವಾಗಿ ಸುಟ್ಟುಹೋದ ಕಾರಣದಿಂದ ಚಹರೆಯನ್ನು ಕಂಡು ಹಿಡಿಯಲು ಸಾಧ್ಯವಾಗಿರಲಿಲ್ಲ. ಕಾರು ಸುಕುಮಾರ್ ಕುರುಪ್​ಗೆ ಸೇರಿದ್ದ ಕಾರಣದಿಂದ ಮೃತದೇಹವೂ ಸುಕುಮಾರ್ ಕುರುಪ್​ನದು ಎಂದು ಭಾವಿಸಿ, ಆತನ ಸಂಬಂಧಿಗಳಿಗೆ ನೀಡಿ, ಅಂತ್ಯಸಂಸ್ಕಾರ ಮಾಡಿಸಲಾಗಿತ್ತು. ಆದರೂ ಸಂದೇಹ ಸಂದೇಹವಾಗಿಯೇ ಉಳಿದಿತ್ತು.

ಕೈ ಮೇಲಿನ ಗಾಯದ ತನಿಖೆ:ಸಂದೇಹ ಪರಿಹರಿಸಿಕೊಳ್ಳುವ ಸಲುವಾಗಿ ತನಿಖೆ ಮುಂದುವರೆದಿತ್ತು. ತನಿಖೆ ವೇಳೆ ಸುಕುಮಾರ್ ಕುರೂಪ್ ಸಂಬಂಧಿ ಭಾಸ್ಕರ್ ಕುರೂಪ್ ಕೈ ಮೇಲೆ ಸುಟ್ಟ ಗಾಯಗಳನ್ನು ಪೊಲೀಸರು ಗಮನಿಸಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ತನಿಖೆ ನಡೆಸಿದಾಗ ಕೇವಲ ಗಲ್ಫ್​ ರಾಷ್ಟ್ರಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಸುಕುಮಾರ್ ಕುರುಪ್ 50 ಸಾವಿರ ರೂಪಾಯಿ ತೆಗೆದುಕೊಂಡಿದ್ದು, ವಾಪಸ್​ ಕೊಡದ ಕಾರಣಕ್ಕೆ ತಾನೇ ಸುಕುಮಾರ್​ ಕುರೂಪ್​​ನನ್ನು ಹತ್ಯೆ ಮಾಡಿರುವುದಾಗಿ ಭಾಸ್ಕರ್ ಕುರುಪ್ ಒಪ್ಪಿಕೊಂಡಿದ್ದನು.

ಚಿಕನ್ ಸಾಂಬಾರ್ :ಭಾಸ್ಕರ್ ಕುರುಪ್ ತಪ್ಪೊಪ್ಪಿಕೊಂಡರೂ ತನಿಖಾಧಿಕಾರಿಯಾಗಿದ್ದ ಡಿವೈಎಸ್ಪಿ ಹರಿದಾಸ್ ಅವರಲ್ಲಿ ಸಂದೇಹ ಮುಂದುವರಿದೇ ಇತ್ತು. ಮತ್ತಷ್ಟು ಸಾಕ್ಷ್ಯ ಕಲೆಹಾಕುವ ಸಲುವಾಗಿ ಚೆರಿಯನಾಡಿನಲ್ಲಿರುವ ಸುಕುಮಾರ್ ಕುರುಪ್ ಮನೆ ಸಮೀಪ ಮಫ್ತಿಯಲ್ಲಿ ಇಬ್ಬರು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಕುರುಪ್ ಮನೆಯಲ್ಲಿ ತಮ್ಮ ಕುಟುಂಬದ ಓರ್ವ ವ್ಯಕ್ತಿಯನ್ನು ಕಳೆದುಕೊಂಡಿರುವ ದುಃಖ ಸ್ವಲ್ಪವೂ ಇರಲಿಲ್ಲ. ಸುಕುಮಾರ್ ಮೃತಪಟ್ಟಿದ್ದ ಎರಡೇ ದಿನದಲ್ಲಿ ಚಿಕನ್ ಸಾಂಬಾರ್ ಮಾಡಿರುವ ಬಗ್ಗೆಯೂ ಪೊಲೀಸರಿಗೆ ಗೊತ್ತಾಗಿತ್ತು.

ಇದೆಲ್ಲಾ ಪ್ರಕರಣ ಮತ್ತಷ್ಟು ಗೋಜಲಾಗಲು ಮತ್ತು ಮತ್ತಷ್ಟು ಸಂದೇಹ ಬರಲು ಕಾರಣವಾಗಿತ್ತು. ಮತ್ತೊಮ್ಮೆ ಈ ಪ್ರಕರಣದ ಆರೋಪಿ ಸ್ಥಾನದಲ್ಲಿದ್ದ ಭಾಸ್ಕರ್ ಕುರುಪ್​ನನ್ನು ವಿಚಾರಣೆಗೆ ಒಳಪಡಿಸಿದಾಗ ನಿಜಾಂಶ ಹೊರಬಂತು. ಇಲ್ಲಿಂದ ಅಸಲಿ ಕಥೆ ಆರಂಭವಾಗುತ್ತದೆ. ಈ ಕಥೆ ಕೇಳಿ ಕೇರಳ ಪೊಲೀಸರು ಬೆಚ್ಚಿ ಬಿದ್ದಿದ್ದರು.. ಅದೇ ಕ್ರಿಮಿನಲ್ ಮಾಸ್ಟರ್ ಮೈಂಡ್ ಸುಕುಮಾರ್​ನ ಕಥೆ..

ಮೃತದೇಹದ ಹುಡುಕಾಟ

ಸುಕುಮಾರ್​ ಕುರುಪ್ ಅಬುದಾಬಿಯ ಮೆರೈನ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. 50 ಲಕ್ಷ ರೂಪಾಯಿಯ ಅಪಘಾತ ವಿಮಾ ಪಾಲಿಸಿಯನ್ನು ಹೊಂದಿದ್ದ ಆತ ಅಪಘಾತದಲ್ಲಿ ಸಾವನ್ನಪ್ಪಿದರೆ 50 ಲಕ್ಷ ರೂಪಾಯಿ ಬರುವಂತಿತ್ತು. ಇದಕ್ಕಾಗಿ ಆತ ಈ ನಾಟಕ ಮಾಡಲು ಆರಂಭಿಸಿದ್ದನು.

ತನ್ನಂಥೆ ಇರುವ ವ್ಯಕ್ತಿಯನ್ನು ಕೊಲೆ ಮಾಡಿ, ಕೊಲೆಯನ್ನು ಅಪಘಾತ ಎಂದು ನಂಬಿಸಿದರೆ 50 ಲಕ್ಷ ರೂಪಾಯಿ ಬರುವ ಆಸೆಯೊಂದಿಗೆ ತನ್ನ ಸಂಬಂಧಿ ಭಾಸ್ಕರ್​ನೊಂದಿಗೆ ಈ ಯೋಜನೆ ರೂಪಿಸಿದ್ದನು. ತನ್ನ ಹೋಲಿಕೆಯಿರುವ ಮೃತದೇಹವನ್ನು ತನ್ನ ಕಾರಿನಲ್ಲಿಟ್ಟು ಸುಟ್ಟುಹಾಕುವುದು ಯೋಜನೆಯ ಭಾಗವಾಗಿತ್ತು. ಅದಾದ ನಂತರ ಸುಕುಮಾರ್ ಸಾವಿನ ಪ್ರಮಾಣಪತ್ರ ಸಲ್ಲಿಸಿ, ವಿಮಾ ಕಂಪನಿಯಿಂದ 50 ಲಕ್ಷ ಪಡೆಯುವುದು ಇವರ ಪ್ಲಾನ್ ಆಗಿತ್ತು.

ಕೊಲೆ ಮಾಡಲು ವ್ಯಕ್ತಿಯ ಹುಡುಕಾಟ:ಕೆಲ ಕಾಲ ಮೃತದೇಹ ಹುಡುಕಿದರೂ ಸಿಗದ ಕಾರಣದಿಂದ ಯಾರಾದರೂ ಜೀವಂತ ಇರುವ ವ್ಯಕ್ತಿಯನ್ನೇ ಕೊಲ್ಲಲು ಯೋಜನೆ ರೂಪಿಸಲಾಗುತ್ತದೆ. ಕರುವತ್ತ ಪ್ರದೇಶದ ಬಳಿಯಿರುವ ಹರಿ ಚಿತ್ರಮಂದಿರ ಬಳಿ ವ್ಯಕ್ತಿಯೋರ್ವ ಇವರ ಕಾರಿಗೆ ಲಿಫ್ಟ್ ಕೇಳುತ್ತಾನೆ. ಆಕಾರ ಮತ್ತು ಗಾತ್ರದಲ್ಲಿ ಸುಕುಮಾರ್​ನನ್ನೇ ಈ ವ್ಯಕ್ತಿ ಹೋಲುವ ಕಾರಣದಿಂದ ಆತನನ್ನು ಕಾರಿಗೆ ಹತ್ತಿಸಿಕೊಂಡ ಸುಕುಮಾರ್ ಮತ್ತು ಭಾಸ್ಕರ್ ವ್ಯಕ್ತಿಗೆ ಬಲವಂತವಾಗಿ ಮದ್ಯ ಕುಡಿಸಿ, ಟವೆಲ್​​ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದರು.

ಇದಾದ ನಂತರ ಶವವನ್ನು ತೆಗೆದುಕೊಂಡು ಕುನ್ನ ಬಳಿಯ ಬ್ರಿಡ್ಜ್​ನಲ್ಲಿ ಕಾರಿನ ಸಮೇತ ಸುಟ್ಟುಹಾಕಿ, ಸುಕುಮಾರ್ ಕುರುಪ್ ಎಂದು ನಂಬಿಸಲು ಕೆಲವೊಂದು ವಸ್ತುಗಳನ್ನು ಅಲ್ಲಿಯೇ ಬಿಟ್ಟು, ಭತ್ತದ ಗದ್ದೆಯಲ್ಲಿ ಎಸ್ಕೇಪ್ ಆದರು. ಕೊಲೆಯಾದ ವ್ಯಕ್ತಿಯ ಹೆಸರು ಅಲ್ಪೇಶ್​​ ಚಾಕೋ (Alpesh chacko).. ಇದೇ ಕಾರಣದಿಂದ ಈ ಪ್ರಕರಣಕ್ಕೆ ಚಾಕೋ ಮರ್ಡರ್ ಕೇಸ್ (Chacko Murder case) ಎಂದು ಕರೆಯಲಾಗುತ್ತದೆ..

ಸುಕುಮಾರ್ ಇದಾನಾ.? ಇಲ್ಲವಾ?

ಸತ್ಯ ಹೊರ ಬಿದ್ದ ನಂತರ ನಿಜವಾದ ಸುಕುಮಾರ್ ಕುರುಪ್​ಗೆ ಹುಡುಕಾಟ ಆರಂಭವಾಯಿತು. ಆತನ ಎಲ್ಲಾ ಆಸ್ತಿಯನ್ನ ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಇಂಟರ್​ಪೋಲ್ ರೆಡ್ ಕಾರ್ನರ್ ನೋಟಿಸ್ ಕೂಡಾ ಈತನ ವಿರುದ್ಧ ಹೊರಡಿಸಿತ್ತು. ಆದರೆ ಆತ ದೊರಕಲೇ ಇಲ್ಲ. ಈಗಲೂ ಕೆಲವರು ಆತ ಬದುಕಿದ್ದಾನೆ ಎಂದು ನಂಬುತ್ತಿದ್ದು, ಇನ್ನೂ ಕೆಲವರು ಸುಕುಮಾರ್ ಕುರುಪ್ ಕೆಲವು ದಿನಗಳ ಕಾಲ ಬದುಕಿ, ಮೃತಪಟ್ಟಿದ್ದಾನೆ ಎಂದು ನಂಬುತ್ತಾರೆ.

ಸಿನಿಮಾಗೆ ವಿರೋಧ..

ಚಾಕೋ ಮೃತಪಡುವ ವೇಳೆ ಆತನ ಪತ್ನಿ ಶಾಂತಮ್ಮ ಗರ್ಭಿಣಿಯಾಗಿದ್ದಳು. ಈಗ ಅವರ ಮಗ ಸಿನಿಮಾಗೆ ವಿರೋಧ ವ್ಯಕ್ತಪಡಿಸಿದ್ದಾನೆ. ತನ್ನ ತಂದೆಯ ಕೊಲೆಯನ್ನು ವಿಜೃಂಭಣೆಯಿಂದ ತೋರಿಸಲಾಗಿದೆ ಎಂದು ಅವನ ಆರೋಪ. ಜೊತೆಗೆ ಈ ಸಿನಿಮಾ ಯುವಕರಲ್ಲಿ ಮತ್ತಷ್ಟು ಅಪರಾಧಿ ಭಾವ ಹೆಚ್ಚಿಸಲು ಕಾರಣವಾಗುತ್ತದೆ ಎಂದು ಆತನ ಅಭಿಪ್ರಾಯ..

ಇದನ್ನೂ ಓದಿ:Women With Long COVID Infection : ದೀರ್ಘಕಾಲ ಕೋವಿಡ್​ಗೆ ಒಳಗಾದ ಮಹಿಳೆಯರಿಗೆ ಹೆಚ್ಚಿನ ವಿಶ್ರಾಂತಿ-ಕಾಳಜಿ ಅಗತ್ಯ

ABOUT THE AUTHOR

...view details