ಕರ್ನಾಟಕ

karnataka

ETV Bharat / bharat

ಹಳೆಯ ಜೀವನ ಪದ್ಧತಿಯ ತಾಣ 'ಕೂರ್ಮ'... ಇದು ಆಧುನಿಕ ತಂತ್ರಜ್ಞಾನದ ಸೌಲಭ್ಯ ಬಳಸದ ಗ್ರಾಮ - ಗುರುಕುಲದ ಜೀವನ ವಿಧಾನ

ಆಂಧ್ರ ಪ್ರದೇಶದ ಕೂರ್ಮ ಗ್ರಾಮವು ಪ್ರಾಚೀನ ವೈದಿಕ ವರ್ಣಾಶ್ರಮ ಪದ್ಧತಿಗಳನ್ನು ಇಂದಿಗೂ ಅನುಸರಿಸುತ್ತಿರುವ ಗ್ರಾಮವೆಂದು ಗುರುತಿಸಲ್ಪಟ್ಟಿದೆ. ಈ ಗ್ರಾಮವು ಪ್ರಾಚೀನ ಭಾರತೀಯ ಗ್ರಾಮೀಣ ಜನರ ಆಚರಣೆಗಳು ಮತ್ತು ಗುರುಕುಲದ ಜೀವನ ವಿಧಾನಕ್ಕೆ ಕನ್ನಡಿಯಂತಿದೆ.

kurma-a-village-that-does-not-use-any-facility-powered-by-modern-technology
ಹಳೆಯ ಜೀವನ ಪದ್ಧತಿಯ ತಾಣ 'ಕೂರ್ಮ'... ಇದು ಆಧುನಿಕ ತಂತ್ರಜ್ಞಾನದ ಸೌಲಭ್ಯ ಬಳಸದ ಗ್ರಾಮ

By

Published : Dec 17, 2022, 9:29 PM IST

ಶ್ರೀಕಾಕುಳಂ (ಆಂಧ್ರ ಪ್ರದೇಶ): ಕಾಲ ಬದಲಾದಂತೆ ಮನುಷ್ಯನ ಜೀವನ ಶೈಲಿಯೊಂದಿಗೆ ಅಭ್ಯಾಸಗಳು ಮತ್ತು ವಿಧಾನಗಳು ಬದಲಾಗಿವೆ. ಆದರೆ, ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕೂರ್ಮ ಎಂಬ ಗ್ರಾಮದ ಜನರು ವಿಭಿನ್ನ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಆಧುನಿಕ ತಂತ್ರಜ್ಞಾನದ ಯಾವುದೇ ಸೌಲಭ್ಯಗಳನ್ನು ಗ್ರಾಮದಲ್ಲಿ ಬಳಸಲ್ಲ. ಸಂಪೂರ್ಣವಾಗಿ ಹಳೆಯ ಜೀವನ ಪದ್ಧತಿ ಮಾರ್ಗಗಳನ್ನೇ ಗ್ರಾಮಸ್ಥರು ಮೈಗೂಡಿಸಿಕೊಂಡಿದ್ದಾರೆ.

ಹೌದು, ಕೂರ್ಮ ಗ್ರಾಮವು ಪ್ರಾಚೀನ ವೈದಿಕ ವರ್ಣಾಶ್ರಮ ಪದ್ಧತಿಗಳನ್ನು ಇಂದಿಗೂ ಅನುಸರಿಸುತ್ತಿರುವ ಗ್ರಾಮವೆಂದು ಗುರುತಿಸಲ್ಪಟ್ಟಿದೆ. ಈ ಗ್ರಾಮವು ಪ್ರಾಚೀನ ಭಾರತೀಯ ಗ್ರಾಮೀಣ ಜನರ ಆಚರಣೆಗಳು ಮತ್ತು ಗುರುಕುಲದ ಜೀವನ ವಿಧಾನಕ್ಕೆ ಕನ್ನಡಿಯಂತಿದೆ. ಕೂರ್ಮ ಗ್ರಾಮವು ಜಗತ್ತನ್ನು ಸನಾತನ ಧರ್ಮದ ಕಡೆಗೆ ತಿರುಗಿಸುವ ಗುರಿ ಹೊಂದಿದೆ.

2018ರಲ್ಲಿ ಸ್ಥಾಪನೆಯಾದ ಗ್ರಾಮ:200 ವರ್ಷಗಳಷ್ಟು ಹಳೆಯದಾದ ಭಾರತೀಯ ಗ್ರಾಮೀಣ ಜೀವನ ಪದ್ಧತಿ, ಸಂಪ್ರದಾಯಗಳು, ಆಚರಣೆಗಳು, ಆಹಾರ ಪದ್ಧತಿ, ಬಟ್ಟೆ, ವೃತ್ತಿಗಳು, ಇವೆಲ್ಲವೂ ಒಂದೇ ಸ್ಥಳದಲ್ಲಿ ಸಿಗುವ ಸ್ಥಳವೇ ಕೂರ್ಮ ಗ್ರಾಮವಾಗಿದೆ. ಈ ಗ್ರಾಮವನ್ನು 2018ರ ಜುಲೈನಲ್ಲಿ ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞೆ ಸಂಘದ ಸಂಸ್ಥಾಪಕ ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದ ಮತ್ತು ಅವರ ಶಿಷ್ಯರು ಸ್ಥಾಪಿಸಿದ್ದಾರೆ.

ಕೆಲವೇ ಜನರಿಂದ ಆರಂಭವಾದ ಕೂರ್ಮ ಗ್ರಾಮದಲ್ಲಿ ಈಗ 12 ಕುಟುಂಬಗಳು, 16 ಗುರುಕುಲ ವಿದ್ಯಾರ್ಥಿಗಳು ಮತ್ತು ಆರು ಬ್ರಹ್ಮಚಾರಿಗಳೊಂದಿಗೆ 56 ಜನರು ಒಟ್ಟಿಗೆ ವಾಸಿಸುತ್ತಿದ್ದಾರೆ. ಬ್ರಿಟಿಷರ ಆಳ್ವಿಕೆಯಲ್ಲಿ ಭಾರತೀಯ ವರ್ಣಾಶ್ರಮ ವ್ಯವಸ್ಥೆಯು ಶಿಥಿಲಗೊಂಡಿದ್ದರಿಂದ ಕೂರ್ಮ ಗ್ರಾಮದ ಜನರು ಮತ್ತೆ ಸನಾತನ ಧರ್ಮದ ಕಡೆಗೆ ಜಗತ್ತನ್ನು ತಿರುಗಿಸಲು ಸಂಕಲ್ಪ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಪ್ರಚಾರ ಕಾರ್ಯಕ್ರಮ, ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ಎಲ್ಲರಿಗೂ ಆದರ್ಶವಾಗಿರುವ ಕೂರ್ಮ ಗ್ರಾಮ: ಆಧುನಿಕ ಕಾಲದಲ್ಲಿ ಮನುಷ್ಯ ಯಂತ್ರದಂತೆ ಕೆಲಸ ಮಾಡುತ್ತಿದ್ದು ಆಗಾಗ್ಗೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾನೆ. ಹಿಂದಿನ ಕಾಲದಲ್ಲಿ ನಮ್ಮ ಅಜ್ಜ, ಮುತ್ತಜ್ಜರು ಪ್ರಕೃತಿಯೊಂದಿಗೆ ಸೌಹಾರ್ದಯುತವಾಗಿ ಬದುಕುತ್ತಿದ್ದರು. ಭಾರತೀಯ ಸಂಸ್ಕೃತಿಯು ಮನುಷ್ಯ ಹೇಗೆ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುತ್ತಾನೆ ಎಂಬುದನ್ನು ಹೇಳುತ್ತದೆ. ಅಂತಹ ಬದುಕಿಗೆ ಕೂರ್ಮ ಗ್ರಾಮ ಸಾಕ್ಷಿಯಾಗಿ ನಿಂತಿದೆ.

ಸ್ಮಾರ್ಟ್‌ಫೋನ್ ಸೇರಿದಂತೆ ಆಧುನಿಕ ತಂತ್ರಜ್ಞಾನದ ಯಾವುದೇ ಸೌಲಭ್ಯವನ್ನು ಈ ಗ್ರಾಮದಲ್ಲಿ ಬಳಸಲ್ಲ. ವಿದ್ಯುತ್ ಸಹ ಕೂರ್ಮ ಗ್ರಾಮದಲ್ಲಿ ಬಳಕೆ ಮಾಡಲ್ಲ. ಯಾವ ಮನೆಗಳಲ್ಲಿ ಲೈಟ್‌, ಫ್ಯಾನ್‌ಗಳಿಲ್ಲ. ಕಟ್ಟಡಗಳಿಗೆ ಸಿಮೆಂಟ್ ಮತ್ತು ಕಬ್ಬಿಣ ಬಳಸುವುದಿಲ್ಲ. ಶಿಕ್ಷಣಕ್ಕೆ ಯಾವ ಶುಲ್ಕ ವಿಧಿಸುವುದಿಲ್ಲ. ಗ್ರಾಮಸ್ಥರೆಲ್ಲರೂ ನಿಸರ್ಗದ ಮಡಿಲಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದಾರೆ.

ಅದರಲ್ಲೂ ಕೂರ್ಮ ಗ್ರಾಮದಲ್ಲಿ ವಾಸಿಸುತ್ತಿರುವ ಎಲ್ಲರೂ ಶ್ರೀಮಂತ ಕುಟುಂಬಗಳಲ್ಲಿ ಹುಟ್ಟಿ ಬೆಳೆದವರು. ಉನ್ನತ ವ್ಯಾಸಂಗ ಮಾಡಿ ಕಂಪನಿಗಳಲ್ಲಿ ಲಕ್ಷಗಟ್ಟಲೆ ಸಂಬಳ ಪಡೆಯುವವರು. ವಿದೇಶಿಗರೂ ಇದ್ದಾರೆ. ಆದರೆ, ಯಾಂತ್ರಿಕ ಜೀವನದಿಂದ ಬೇಸತ್ತು, ಎಲ್ಲವನ್ನೂ ಬಿಟ್ಟು ಕುಟುಂಬ ಸಮೇತ ಕೂರ್ಮ ಗ್ರಾಮದಲ್ಲಿ ಪ್ರಕೃತಿಯೊಂದಿಗೆ ಜೀವಿಸತೊಡಗಿದ್ದಾರೆ. ಮಣ್ಣಿನ ಮನೆಯಲ್ಲಿ ಸಿಗುವ ಸುಖಕ್ಕಿಂತ ಕಾರು, ಬಂಗಲೆಗಳಲ್ಲಿ ಸಿಗಲ್ಲ. ಗುಡಿಸಲಿನಲ್ಲಿ ವಾಸವಿದ್ದರೂ ತುಂಬಾ ಖುಷಿಯಾದ ಜೀವನ ಸಾಗುತ್ತಿದ್ದಾರೆ.

ಸ್ವಾವಲಂಬಿ ಜೀವನ:ಇಡೀ ಗ್ರಾಮದಲ್ಲಿ ಸ್ವಾವಲಂಬಿ ಜೀವನ ಪದ್ಧತಿಯೇ ಪ್ರಧಾನವಾಗಿದೆ. ಇಲ್ಲಿನ ವಾಸಿಗಳು ಕೃಷಿ, ಪಶುಪಾಲನೆಯನ್ನೂ ಮಾಡುತ್ತಾರೆ. ನಾಟಿ ಮಾಡುವುದರಿಂದ ಹಿಡಿದು ಕೊಯ್ಲು ಮಾಡುವವರೆಗೆ ಇತರರ ಮೇಲೆ ಅವಲಂಬಿತವಾಗಿಲ್ಲ. ರಾಸಾಯನಿಕ ರಹಿತ ಕೃಷಿಯೊಂದಿಗೆ ತಮ್ಮ ನೆಚ್ಚಿನ ತರಕಾರಿಗಳನ್ನು ಬೆಳೆಯುತ್ತಾರೆ. ಕೈಮಗ್ಗಗಳಿಂದ ತಮ್ಮ ಬಟ್ಟೆಗಳನ್ನು ತಾವೇ ತಯಾರಿಸಿಕೊಳ್ಳುತ್ತಾರೆ.

'ಫೋನ್‌ಗಳು, ಕಂಪ್ಯೂಟರ್‌ಗಳು, ಕಾರುಗಳು ತಾತ್ಕಾಲಿಕ. ಇಂದಿನ ಜೀವನದಲ್ಲಿ ಪ್ರತಿ ಕ್ಷಣವೂ ಒತ್ತಡ ಮತ್ತು ಅದರೊಂದಿಗೆ ಓಡಬೇಕಾಗಿದೆ. ಜನರು ಹಣದ ವ್ಯಾಮೋಹಕ್ಕೆ ಬಿದ್ದು ಕೂತು ತಿನ್ನಲು ಸಮಯ ಸಿಗದಂತೆ ಆಗಿದೆ. ನಮ್ಮ ತಂದೆ ಮತ್ತು ಅಜ್ಜನ ಜೀವನವನ್ನು ನೋಡಿದರೆ, ಅವರು ತುಂಬಾ ಸಂತೋಷದಿಂದ ಬದುಕುತ್ತಿದ್ದರು. ಅವರ ಬದುಕನ್ನು ನೋಡಿದರೆ, ನಾವು ಹೇಗೆ ಬದುಕುತ್ತಿದ್ದೇವೆ ಎಂಬುದು ಗೊತ್ತಾಗುತ್ತದೆ' -ನುಹಾರಿ, ರಷ್ಯಾದ ವ್ಯಕ್ತಿ.

ABOUT THE AUTHOR

...view details