ತೆಲಂಗಾಣ:ತೆಲಂಗಾಣ ಸಚಿವ ಕೆ.ಟಿ.ರಾಮರಾವ್ ಅವರು ಪ್ರಸ್ತುತ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರಾಗಿರುವ ರೇವಂತ್ ರೆಡ್ಡಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ತೆಲಂಗಾಣದಲ್ಲಿ ಭ್ರಷ್ಟಚಾರ ಹೆಚ್ಚಾಗಿದೆ ಎನ್ನುತ್ತಾರೆ. ಆದರೆ ಅವರ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ರೇವಂತ್ ರೆಡ್ಡಿ ಅವರು ದಾವೂದ್ ಇಬ್ರಾಹಿಂ ಮತ್ತು ಚಾರ್ಲ್ಸ್ ಶೋಭಾರಾಜ್‌ಗಿಂತಲೂ ಹೆಚ್ಚು ಅಪಾಯಕಾರಿ ಎಂದಿದ್ದಾರೆ.
ರೇವಂತ್ ರೆಡ್ಡಿ ತಮ್ಮದೇ ಪಕ್ಷದ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ರಾಹುಲ್ ಗಾಂಧಿ ಮುಗ್ಧ, ಹಾಗಾಗಿ ಅವರಿಗೆ ಗೊತ್ತಿಲ್ಲ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಪಡೆದುಕೊಳ್ಳಲು ಎಐಸಿಸಿ ಉಸ್ತುವಾರಿಗೆ ಟಿಪಿಸಿಸಿ ಅಧ್ಯಕ್ಷರು 50 ಕೋಟಿ ರೂಪಾಯಿ ನೀಡಿದ್ದಾರೆ ಎಂದು ತಮ್ಮದೇ ಸಂಸದ ವೆಂಕಟ್ ರೆಡ್ಡಿ ಹೇಳಿದ್ದಾರೆ. ಅಲ್ಲದೇ ಹಣ ಪಡೆದು ಟಿಕೆಟ್ ಹಂಚುತ್ತಿದ್ದಾರೆ ಎಂಬ ಆರೋಪವೂ ಇದೆ ಎಂದು ರಾಮರಾವ್ ತಿಳಿಸಿದರು.
ಮುಂದುವರೆದು ಮಾತನಾಡಿ, ರಾಹುಲ್ ಗಾಂಧಿ ಅವರನ್ನು ನಾಯಕ ಎನ್ನುವ ಬದಲು ಓದುಗ ಎಂದು ಕರೆಯಬೇಕು. ನಾನು ಅವರನ್ನು ನಾಯಕ ಎಂದು ಪರಿಗಣಿಸುವುದಿಲ್ಲ. ಯಾಕೆಂದರೆ ರಾಹುಲ್ ಗಾಂಧಿ ಹೋಮ್ ವರ್ಕ್ ಮಾಡದೇ ಸ್ಥಳೀಯ ನಾಯಕರ ಸ್ಕ್ರಿಪ್ಟ್ ಓದಿ ವಾಪಸ್ ಹೋಗುವವರು. ಅವರು ಸ್ಕ್ರಿಪ್ಟ್‌ಗಳನ್ನು ಓದುತ್ತಾರೆಯೇ ವಿನಃ ಅದರಲ್ಲೇನು ಬರೆದಿದ್ದಾರೆ ಎಂಬುದರ ಬಗ್ಗೆ ಗಮನ ಹರಿಸುವುದಿಲ್ಲ ಎಂದು ಟೀಕಿಸಿದರು.
ರಾಹುಲ್ ಗಾಂಧಿ ಗುರುವಾರ ತೆಲಂಗಾಣದಲ್ಲಿ ಕೆ.ಚಂದ್ರಶೇಖರ ರಾವ್ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದರು. ಕೆಸಿಆರ್ ಸರ್ಕಾರ ದೇಶದ ಅತ್ಯಂತ ಭ್ರಷ್ಟ ಮತ್ತು ಒಂದು ಕುಟುಂಬದಿಂದ ನಿಯಂತ್ರಿಸಲ್ಪಟ್ಟಿದೆ ಎಂದು ಆರೋಪಿಸಿದ್ದರು. ತೆಲಂಗಾಣ ರಾಜ್ಯದ ಕನಸು ಕಂಡಾಗ ರಾಜ್ಯದಲ್ಲಿ ಜನಪರ ಆಡಳಿತ ನಡೆಯುತ್ತದೆ ಎಂದುಕೊಂಡಿರಿ. ಆದರೆ ತೆಲಂಗಾಣದಲ್ಲಿ ಒಂದೇ ಕುಟುಂಬದ ಆಡಳಿತ ನಡೆಯುತ್ತಿರುವುದು ಈಗ ಸ್ಪಷ್ಟ ಎಂದು ಹೇಳಿದ್ದರು.
ಇದನ್ನೂ ಓದಿ:ದ್ವೇಷ ಭಾಷಣ ಆರೋಪ: ತೆಲಂಗಾಣ ಶಾಸಕ ರಾಜಾಸಿಂಗ್ ಠಾಕೂರ್ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್