ಅಸ್ಸೋಂ :ರಾಷ್ಟ್ರಪಿತ ಮಹಾತ್ಮ ಗಾಂಧಿ 1932ರಲ್ಲಿ ಹರಿಜನ ಅಥವಾ ದೇಶದ ದಲಿತರ ಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ 'ಹರಿಜನ ಸೇವಕ ಸಂಘ' ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ದೇವಾಲಯಗಳು, ಶಾಲೆಗಳು ಸೇರಿ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತ ಪ್ರವೇಶಕ್ಕಾಗಿ ಅವರು ಆಗ್ರಹಿಸಿದರು. ಈ ಮೂಲಕ ದಲಿತರನ್ನು ಮುಖ್ಯ ವಾಹಿನಿಗೆ ತರುವ ಕೆಲಸ ಮಾಡಿದರು. ಇದೇ ವೇಳೆ ಅಸ್ಸೋಂನಲ್ಲಿ ಗಾಂಧೀಜಿಯ ಕರೆಗೆ ಹರಿಜನ ಬಂಧು ಕೃಷ್ಣನಾಥ್ ಶರ್ಮಾ ಅವರು ಚಳವಳಿಯ ನೇತೃತ್ವ ವಹಿಸಿ ದಲಿತ ಪರ ದನಿಗೂಡಿಸಿದರು.
ಹರಿಜನರ ಹಕ್ಕುಗಳಿಗಾಗಿ ಹೋರಾಟ :ಗಾಂಧಿವಾದಿಯಾಗಿದ್ದ ಕೃಷ್ಣನಾಥ್ ಶರ್ಮಾ ಅವರು ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದರು. ಆದರೆ ದಲಿತ ಚಳವಳಿಗೆ ಧುಮುಕಿದ್ದ ಕಾರಣ ಅವರನ್ನು ಸಮಾಜದಿಂದಲೇ ಹೊರಹಾಕಲಾಯಿತು. ಫೆ. 28, 1887ರಲ್ಲಿ ಅಸ್ಸೋಂನ ಜೋರ್ಹತ್ ಜಿಲ್ಲೆಯ ಸರ್ಬೈಬಂದ್ನಲ್ಲಿ ಜನಿಸಿದ ಶರ್ಮಾ, ಗಾಂಧೀಜಿಯ ದಲಿತ ಚಳವಳಿಯಲ್ಲಿ ಹರಿಜನರ ಹಕ್ಕುಗಳಿಗಾಗಿ ಹೋರಾಟಕ್ಕಿಳಿದರು. ಅರ್ಲ್ ಲಾ ಕಾಲೇಜಿನಲ್ಲಿ ಕಾನೂನು ಪದವಿ ಹಾಗೂ ವಿಜ್ಞಾನ ಪದವಿ ಪಡೆದಿದ್ದರು. ಮುಂದೆ ಕಾನೂನು ಅಭ್ಯಾಸ ಮೊಟಕುಗೊಳಿಸಿ 1921ರ ಗಾಂಧೀಜಿ ಕರೆಕೊಟ್ಟ ಅಸಹಕಾರ ಚಳವಳಿಯಲ್ಲೂ ಭಾಗಿಯಾದರು.
ಅಸಹಕಾರ ಚಳವಳಿಯಲ್ಲಿ ಭಾಗಿ :ಅಸ್ಸೋಂನಿಂದ ಗಾಂಧೀಜಿಯವರ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ ಪ್ರವರ್ತಕರಲ್ಲಿ ಕೃಷ್ಣನಾಥ್ ಶರ್ಮಾ ಸಹ ಒಬ್ಬರು. ಅವರು ಚಹಾ ತೋಟದ ಮಾಲೀಕರ ಶ್ರೀಮಂತ ಕುಟುಂಬಕ್ಕೆ ಸೇರಿದವರು. ಆದಾಗ್ಯೂ, ಅವರು ಆರಂಭಿಸಿದ ಅಸಹಕಾರ ಚಳವಳಿಯಲ್ಲಿ ಭಾಗವಹಿಸಲು ಐಷಾರಾಮಿ ಜೀವನ ತ್ಯಾಗ ಮಾಡಿದರು. ಗಾಂಧೀಜಿ ಸಹ ಬಹಳ ಪ್ರಸಿದ್ಧ ವಕೀಲರಾಗಿದ್ದರು, ಆದರೆ ಚಳವಳಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದರು.
ಕೃಷ್ಣನಾಥ್ 1921ರಲ್ಲಿ ಜೋರ್ಹತ್ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿಯನ್ನು ವಹಿಸಿಕೊಂಡರು. ಅದೇ ವರ್ಷ ಶರ್ಮಾ ಜೊತೆಗೆ ನವಿನ್ ಚಂದ್ರ ಬೋರ್ಡೊಲಾಯ್, ತರುಣ್ ರಾಮ್ ಫುಕಾನ್ ಮತ್ತು ಕುಲಧರ್ ಚಾಲೀಹಾ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಯಿತು. ಆ ದಿನಗಳಲ್ಲಿ, ಶರ್ಮಾ ಗಾಂಧೀಜಿಯವರ ಚಿಂತನೆಯಂತೆ ಅನಕ್ಷರತೆ ನಿರ್ಮೂಲನೆ, ಶಾಲಾ -ಕಾಲೇಜುಗಳ ಆರಂಭ, ಆಸ್ಪತ್ರೆಗಳ ಸ್ಥಾಪನೆ, ದೂರದ ಪ್ರದೇಶಗಳಲ್ಲಿ ರಸ್ತೆಗಳ ನಿರ್ಮಾಣ ಮುಂತಾದ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಅಸ್ಸೋಂನಲ್ಲಿ ಹಲವಾರು ಚಳವಳಿ ಆರಂಭಿಸಿದ್ದರು.