ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಮಥುರಾದಲ್ಲಿರುವ ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಪ್ರಕರಣ ಇದೀಗ ಮತ್ತಷ್ಟು ಮಹತ್ವದ ಘಟ್ಟಕ್ಕೆ ತಲುಪಿದೆ. ಶ್ರೀಕೃಷ್ಣ ಜನ್ಮಭೂಮಿ ಇರುವ ಸಂಪೂರ್ಣ ಪ್ರದೇಶದ ವಿಡಿಯೋ ಸಮೀಕ್ಷೆ ನಡೆಸಲು ಅನಮತಿ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ನಾಲ್ಕು ತಿಂಗಳ ಒಳಗೆ ಇತ್ಯರ್ಥ ಮಾಡುವಂತೆ ಅಲಹಾಬಾದ್ ಹೈಕೋರ್ಟ್ ಮಥುರಾದ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.
17ನೇ ಶತಮಾನದ ಶಾಹಿ ಈದ್ಗಾ ಮಸೀದಿಯನ್ನು ಕತ್ರಾ ಕೇಶವ್ ದೇವ್ ದೇವಸ್ಥಾನದಿಂದ ತೆರವು ಮಾಡಬೇಕೆಂದು ಹಿಂದೂ ಸಂಘಟನೆಗಳು ದಾಖಲಿಸಿರುವ ಮೊಕದ್ದಮೆಗಳಲ್ಲಿ ಒಂದಾಗಿದ್ದು, ಕೃಷ್ಣನ ಜನ್ಮಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿದೆ. 1669-70ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ಕೃಷ್ಣ ಜನ್ಮಭೂಮಿಯಲ್ಲಿ ಈ ಮಸೀದಿ ನಿರ್ಮಿಸಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಶ್ರೀಕೃಷ್ಣನ ಆರಾಧಕರಾದ ನಮಗೆ ದೇವರ ಆಸ್ತಿಯನ್ನು ಮರುಸ್ಥಾಪಿಸುವಂತೆ ಕೋರಿ ಮೊಕದ್ದಮೆ ಹೂಡುವ ಹಕ್ಕಿದೆ. ಕೃಷ್ಣ ಜನ್ಮಭೂಮಿಯಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ. ಆಸ್ತಿ ಹಂಚಿಕೆ ವಿಚಾರದಲ್ಲಿ ಹಲವು ವರ್ಷಗಳ ಹಿಂದೆಯೇ ರಾಜಿ ಮಾಡಿಕೊಳ್ಳಲಾಗಿತ್ತು. ಆದರೆ, ಆ ರಾಜಿ ಕಾನೂನುಬಾಹಿರವಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.